ADVERTISEMENT

Israel Iran War | ಶರಣಾಗುವ ಮಾತೇ ಇಲ್ಲ: ಟ್ರಂಪ್‌ಗೆ ಖಮೇನಿ ತಿರುಗೇಟು

ಏಜೆನ್ಸೀಸ್
Published 18 ಜೂನ್ 2025, 13:14 IST
Last Updated 18 ಜೂನ್ 2025, 13:14 IST
ಆಯತೋಲ್ಲಾ ಖಮೇನಿ
ಆಯತೋಲ್ಲಾ ಖಮೇನಿ   

ದುಬೈ: ‘ಬೇಷರತ್ತಾಗಿ ಶರಣಾಗಬೇಕು’ ಎಂಬ ಅಮೆರಿಕದ ಕರೆಯನ್ನು ಇರಾನ್‌ ಪರಮೋಚ್ಚ ನಾಯಕ ಆಯತೋಲ್ಲಾ ಅಲಿ ಖಮೇನಿ ಬುಧವಾರ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. 

ಇರಾನ್‌ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಗಳಲ್ಲಿ ಅಮೆರಿಕ ಮಧ್ಯಪ್ರವೇಶಿಸಿದ್ದೇ ಆದಲ್ಲಿ, ಅದು ಆ ಎರಡು ದೇಶಗಳಿಗೆ ಸರಿಪಡಿಸಲು ಸಾಧ್ಯವಾಗದ ಹಾನಿ ಉಂಟು ಮಾಡಲಿದೆ ಎಂದೂ ಖಮೇನಿ ಎಚ್ಚರಿಸಿದ್ದಾರೆ.

ಖಮೇನಿ ಅವರ ಈ ಹೇಳಿಕೆ ಇರುವ ವಿಡಿಯೊವನ್ನು ಸರ್ಕಾರಿ ಒಡೆತನದ ಸುದ್ದಿವಾಹಿನಿ ಪ್ರಸಾರ ಮಾಡಿದೆ.

ADVERTISEMENT

‘ಖಮೇನಿ ಅವರು ಬೇಷರತ್ತಾಗಿ ಶರಣಾಗಬೇಕು’ ಹಾಗೂ ‘ಖಮೇನಿ ಎಲ್ಲಿ ಅಡಗಿದ್ದಾರೆ ಎಂಬುದು ಅಮೆರಿಕಕ್ಕೆ ಗೊತ್ತಿದೆ. ಆದರೆ, ಸದ್ಯ ಅವರನ್ನು ಹತ್ಯೆ ಮಾಡುವ ಯೋಜನೆ ಇಲ್ಲ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ಹೇಳಿದ್ದರು. ಮಾರನೇ ದಿನವೇ ಖಮೇನಿ ಅವರಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.

‘ಇರಾನ್‌ ಶರಣಾಗುವ ರಾಷ್ಟ್ರವೇ ಅಲ್ಲ’ ಎಂದಿರುವ ಖಮೇನಿ, ಟ್ರಂಪ್‌ ಅವರ ಇಂತಹ ಬೆದರಿಕೆಯ ಮತ್ತು ಅಸಂಬದ್ಧ ಹೇಳಿಕೆಗಳನ್ನು ತಿರಸ್ಕರಿಸುತ್ತಿರುವುದಾಗಿ ಹೇಳಿದ್ದಾರೆ.

‘ಇರಾನ್‌ ಹಾಗೂ ಇಲ್ಲಿನ ಪ್ರಜೆಗಳ ಶಕ್ತಿ ಮತ್ತು ಇತಿಹಾಸ ಗೊತ್ತಿರುವ ಬುದ್ಧಿವಂತ ವ್ಯಕ್ತಿಗಳು, ಈ ದೇಶದ ವಿರುದ್ಧ ಬೆದರಿಕೆಯ ಭಾಷೆಯಲ್ಲಿ ಮಾತನಾಡುವುದಿಲ್ಲ. ಇರಾನ್‌, ಶರಣಾಗುವ ಜಾಮಮಾನದ ದೇಶವಲ್ಲ’ ಎಂದಿದ್ದಾರೆ.

ಇರಾನ್‌ ಮೇಲೆ ಇಸ್ರೇಲ್‌ ದಾಳಿ ಆರಂಭಿಸಿದ ಬಳಿಕ ಖಮೇನಿ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.

ಎಚ್ಚರಿಕೆ:

ಇಸ್ರೇಲ್‌ ಜೊತೆಗಿನ ಸಂಘರ್ಷದಲ್ಲಿ ಅಮೆರಿಕ ಭಾಗಿಯಾದಲ್ಲಿ, ಪೂರ್ಣ ಪ್ರಮಾಣದ ಯುದ್ಧದ ಪರಿಸ್ಥಿತಿ ಉಂಟಾಗಲಿದೆ ಎಂದು ಇರಾನ್‌ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಘಾಯಿ ಎಚ್ಚರಿಸಿದ್ದಾರೆ.

ನಾಗರಿಕ ಉದ್ದೇಶಗಳಿಗಾಗಿ ಪರಮಾಣು ಯೋಜನೆಯನ್ನು ಮಾಡಲಾಗುತ್ತಿದೆ ಎಂದು ಇರಾನ್‌ನ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.