ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಮೃತಪಟ್ಟಿದ್ದಾರೆ. ಅವರ ಮೂವರು ಅಂಗರಕ್ಷಕರಿಗೂ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.
ನವೆಂಬರ್ 11ರಂದು ಇರಾಕ್ ಸಂಸತ್ ಚುನಾವಣೆ ನಡೆಯಲಿದೆ. ಚುನಾವಣೆಗೂ ಮುನ್ನ ಅಭ್ಯರ್ಥಿಯೊಬ್ಬರು ಸಾವಿಗೀಡಾದ ಮೊದಲ ಘಟನೆ ಇದಾಗಿದೆ.
‘ಬಾಗ್ದಾದ್ ಪ್ರಾಂತೀಯ ಮಂಡಳಿಯ ಪ್ರಸ್ತುತ ಸದಸ್ಯ ಮತ್ತು ಸಂಸತ್ತಿನ ಅಭ್ಯರ್ಥಿ ಸಫಾ ಅಲ್ ಮಶ್ಹದಾನಿ ಅವರ ವಾಹನದ ಕೆಳಗೆ ಬಾಂಬ್ ಇಟ್ಟು ಸ್ಫೋಟಿಸಲಾಗಿದೆ. ತಕ್ಷಣವೇ ಅವರು ಮೃತಪಟ್ಟರು. ಅವರ ಮೂವರು ಅಂಗರಕ್ಷಕರು ಗಂಭೀರವಾಗಿ ಗಾಯಗೊಂಡರು’ಎಂದು ಮೂಲಗಳು ತಿಳಿಸಿವೆ.
ರಾಜಧಾನಿಯಿಂದ 40 ಕಿ.ಮೀ ಉತ್ತರಕ್ಕೆ ಮತ್ತು ಬಾಗ್ದಾದ್ ಪ್ರಾಂತ್ಯದ ಒಂದು ಭಾಗವಾಗಿರುವ ತರ್ಮಿಯಾದಲ್ಲಿ ಬುಧವಾರ ಮುಂಜಾನೆ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ವಿವರಿಸಿವೆ.
ಉದ್ಯಮಿ ಖಾಮಿಸ್ ಅಲ್ ಖಂಜರ್ ಮತ್ತು ಸಂಸತ್ತಿನ ಸ್ಪೀಕರ್ ಮಹಮೂದ್ ಅಲ್ ಮಶ್ಹದಾನಿ ನೇತೃತ್ವದ ಇರಾಕ್‌ನ ಅತಿದೊಡ್ಡ ಸುನ್ನಿ ಮುಸ್ಲಿಂ ಒಕ್ಕೂಟಗಳಲ್ಲಿ ಒಂದಾದ ಸಾರ್ವಭೌಮತ್ವ ಮೈತ್ರಿಕೂಟದ ಮೂಲಕ ಮಶ್ಹದಾನಿ ಸ್ಪರ್ಧಿಸಿದ್ದರು.
ಬಾಂಬ್ ದಾಳಿಯನ್ನು ಖಂಡಿಸಿರುವ ಮೈತ್ರಿಕೂಟವು, ಹೇಡಿತನದ ಕೃತ್ಯ ಎಂದು ಹೇಳಿದೆ. ಮಶ್ಹದಾನಿ ಅವರು ತಮ್ಮ ಜನರು ಮತ್ತು ತರ್ಮಿಯಾ ನಗರಕ್ಕಾಗಿ, ಭಯೋತ್ಪಾದನೆ ಮತ್ತು ಅನಿಯಂತ್ರಿತ ಶಸ್ತ್ರಾಸ್ತ್ರ ಪಡೆಗಳ ವಿರುದ್ಧ ಹೋರಾಡಿದ್ದರು ಎಂದೂ ತಿಳಿಸಿದೆ.
ಇರಾಕ್‌ನ 329 ಸಂಸದರಲ್ಲಿ ಹೆಚ್ಚಿನವರು ನೆರೆಯ ಇರಾನ್‌ನೊಂದಿಗೆ ಹೊಂದಿಕೊಂಡಿರುವ ಶಿಯಾ ಪಕ್ಷಗಳನ್ನು ಪ್ರತಿನಿಧಿಸುತ್ತಾರೆ.
2003ರಲ್ಲಿ ಅಮೆರಿಕವು ದೀರ್ಘಕಾಲದ ಸದ್ದಾಂ ಹುಸೇನ್ ಆಡಳಿತವನ್ನು ತೊಡೆದುಹಾಕಿದ ಬಳಿಕ ಇದು ಆರನೇ ಚುನಾವಣೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.