ಪ್ರಾತಿನಿಧಿಕ ಚಿತ್ರ
ದುಬೈ: ಇಸ್ಲಾಮಿಕ್ ಸ್ಟೇಟ್ (ಐಎಸ್)ನ ಪ್ರಮುಖ ನಾಯಕನಾಗಿದ್ದ ಅಬು ಬಾಕರ್ ಅಲ್ ಬಾಗ್ದಾದಿ ಪತ್ನಿಗೆ ಇರಾಕ್‌ನ ನ್ಯಾಯಾಲಯ ಬುಧವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.
ತಮ್ಮ ಮನೆಯಲ್ಲಿ ಯಾಜಿದಿ ಮಹಿಳೆಯರನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದ ಆರೋಪವನ್ನು ಈ ಮಹಿಳೆ ಎದುರಿಸುತ್ತಿದ್ದರು. ಬಾಗ್ದಾದಿ ಮೃತಪಟ್ಟಿದ್ದಾನೆ. ಇದೀಗ ನ್ಯಾಯಾಲಯ ಆತನ ಮಡದಿಗೆ ಶಿಕ್ಷೆ ಪ್ರಕಟಿಸಿದ್ದು, ಹೆಸರು ಬಹಿರಂಗಪಡಿಸಿಲ್ಲ.
ಇಸ್ಲಾಮಿಕ್ ಸ್ಟೇಟ್ ಗುಂಪು ಇರಾಕ್‌ನ ಸಿಂಜಾರ್ ಜಿಲ್ಲೆಯಿಂದ ಮಹಿಳೆಯರನ್ನು ಅಪಹರಿಸಿದ್ದರು. ನಂತರ ಮೊಸೂಲ್‌ನಲ್ಲಿರುವ ಬಾಗ್ದಾದಿ ಪತ್ನಿಗೆ ಸೇರಿದ ಮನೆಯಲ್ಲಿ ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು. ಈಕೆಯನ್ನು ಇರಾಕ್‌ನ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು.
ಮನುಷ್ಯತ್ವದ ವಿರುದ್ಧ ಕಾರ್ಯಾಚರಣೆ ನಡೆಸಿದ ಹಾಗೂ ನರಮೇಧಕ್ಕೆ ಬೆಂಬಲ ನೀಡಿದ ಆರೋಪ ಸಾಬೀತಾಗಿದೆ. ಯಾಜಿದಿ ಜನರ ವಿರುದ್ಧ ಭಯೋತ್ಪಾದನೆಗೆ ನೆರವು ನೀಡಿದಕ್ಕಾಗಿ ಶಿಕ್ಷೆ ಪ್ರಕಟಿಸುತ್ತಿರುವುದಾಗಿ ನ್ಯಾಯಾಲಯ ಹೇಳಿದೆ.
ಇಸ್ಲಾಮಿಕ್ ಸ್ಟೇಟ್‌ನ ಅಬು ಬಾಕರ್ ಅಲ್ ಬಾಗ್ದಾದಿಯನ್ನು ಅಮೆರಿಕದ ಸೇನಾಪಡೆಯು ಸಿರಿಯಾದಲ್ಲಿ 2019ರ ನವೆಂಬರ್‌ನಲ್ಲಿ ಹತ್ಯೆಗೈದಿತ್ತು. ಈತ ತನ್ನನ್ನು ಮುಸ್ಲಿಮರ ಕಲೀಫಾ ಎಂದು ಘೋಷಿಸಿಕೊಂಡಿದ್ದ. ಇರಾಕ್ ಹಾಗೂ ಸಿರಿಯಾದ ಬಹುತೇಕ ಭಾಗದಲ್ಲಿ 2014ರಿಂದ 2017ರವರೆಗೆ ಹಿಡಿತ ಸಾಧಿಸಿದ್ದ ಈತನ ವಿರುದ್ಧ ಅಮೆರಿಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.