ಕೊಲಂಬೊ: ದ್ವೀಪರಾಷ್ಟ್ರದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ತಮ್ಮ ಜಾಲ ವಿಸ್ತರಿಸದಂತೆ ಮಾಡಲು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಪ್ರಧಾನಿ ರಾನಿಲ್ ವಿಕ್ರಮಸಿಂಘೆ, ತೀವ್ರವಾದ ಹಾಗೂ ಧಾರ್ಮಿಕ ಮೂಲಭೂತವಾದವನ್ನು ಬೆಂಬಲಿಸದಂತೆ ದೇಶದ ಜನತೆಗೆ ಮನವಿ ಮಾಡಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ನಾಗರಿಕ ಹಾಗೂ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ’ಈಸ್ಟರ್ ಭಾನುವಾರ ಆತ್ಮಾಹುತಿ ದಾಳಿ ನಡೆಸಿ, 258 ಜನರ ಸಾವಿಗೆ ಕಾರಣರಾದವರಿಗೆ ಭದ್ರತಾ ಪಡೆ ಹಾಗೂ ಪೊಲೀಸರು ತಕ್ಕ ಪಾಠ ಕಲಿಸಲಿದ್ದಾರೆ‘ ಎಂದು ಹೇಳಿದ್ದಾಗಿ ’ಕೊಲಂಬೊ ಪೇಜ್’ ಪತ್ರಿಕೆ ವರದಿ ಮಾಡಿದೆ.
’ಈಗ ನಡೆಯುತ್ತಿರುವ ಕಾರ್ಯಾಚರಣೆಯಿಂದ ಆತ್ಮಾಹುತಿ ದಾಳಿಯಂತಹ ಭಯೋತ್ಪಾದಕ ಕೃತ್ಯ ಅಂತ್ಯಗೊಳ್ಳುತ್ತದೆ ಎಂದರ್ಥವಲ್ಲ. ದೇಶದಲ್ಲಿ ಮತ್ತೊಮ್ಮೆ ಭಯೋತ್ಪಾದಕರಿಂದ ವಿಧ್ವಂಸಕ ಕೃತ್ಯಗಳು ನಡೆಯದಂತೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅಗತ್ಯ‘ ಎಂದರು.
’ಮುಸ್ಲಿಂ ಸಮುದಾಯದ ನೆರವಿನಿಂದ ಮದರಸಾ ಶಿಕ್ಷಣ ಮಸೂದೆಯಲ್ಲಿ ಹಲವಾರು ಬದಲಾವಣೆ ತರಲಾಗುತ್ತಿದೆ. ಎಲ್ಲ ನಾಮಫಲಕಗಳು ಮೂರು ರಾಷ್ಟ್ರೀಯ ಭಾಷೆಗಳಲ್ಲಿಯೇ ಇರಬೇಕು ಎಂಬಂತಹ ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ‘ ಎಂದೂ ಪ್ರಧಾನಿ ವಿಕ್ರಮಸಿಂಘೆ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.