ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟೀನ್‌ನ ಬಂಡುಕೋರ ಗುಂಪು ಹಮಾಸ್ ವಿರುದ್ಧ ಕಾರ್ಯಾಚರಣೆಯಲ್ಲಿ ನಿರತವಾಗಿರುವ ಇಸ್ರೇಲ್ ಸೈನಿಕರು
– ಎಎಫ್‌ಪಿ ಚಿತ್ರ
ಜೆರುಸಲೇಂ: ಹಮಾಸ್ ಬಂಡುಕೋರರ ವಿರುದ್ಧದ ಯುದ್ಧದಲ್ಲಿ ದಕ್ಷಿಣ ಗಾಜಾದಲ್ಲಿ ಹೋರಾಡುವಾಗ ತನ್ನ ನಾಲ್ವರು ಯೋಧರು ಸೋಮವಾರ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಗಾಜಾದ ದಕ್ಷಿಣ ನಗರ ರಫಾದಲ್ಲಿನ ಕಟ್ಟಡವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸೈನಿಕರು ಹತರಾದರು ಎಂದು ಇಸ್ರೇಲ್‌ನ ಸಾರ್ವಜನಿಕ ಸುದ್ದಿ ಪ್ರಸಾರಕ ‘ಕಾನ್’ ಹೇಳಿದೆ.
ಈ ಸ್ಪೋಟದಲ್ಲಿ ಏಳು ಮಂದಿ ಯೋಧರು ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ‘ಟೈಮ್ಸ್ ಆಫ್ ಇಸ್ರೇಲ್’ ವರದಿ ಮಾಡಿದೆ.
ಅಕ್ಟೋಬರ್ 27ರಂದು ಗಾಜಾದಲ್ಲಿ ಆಕ್ರಮಣ ಪ್ರಾರಂಭವಾದ ನಂತರ ಮೃತಪಟ್ಟ ಇಸ್ರೇಲ್ ಸೈನಿಕರ ಸಂಖ್ಯೆ 298ಕ್ಕೆ ತಲುಪಿದೆ ಎಂದು ಅದು ಹೇಳಿದೆ.
ರಫಾದಲ್ಲಿನ ಶಬುರಾ ನಿರಾಶ್ರಿತರ ಶಿಬಿರದಲ್ಲಿರುವ ಕಟ್ಟಡವನ್ನು ತನ್ನ ಹೋರಾಟಗಾರರು ಸೋಮವಾರ ಸಂಜೆ ಸ್ಫೋಟಿಸಿದ್ದಾರೆ ಎಂದು ಹಮಾಸ್‌ನ ಸಶಸ್ತ್ರ ವಿಭಾಗವಾದ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಹೇಳಿಕೊಂಡಿದೆ.
‘ಝಿಯೋನಿಸ್ಟ್ ಪಡೆಗಳು ಹೊಕ್ಕಿದ್ದ ಕಟ್ಟಡದಲ್ಲಿ ನಮ್ಮ ಹೋರಾಟಗಾರರು ಸ್ಫೋಟಕಗಳನ್ನು ಇರಿಸಿದ್ದರು. ಆ ಕಟ್ಟಡವನ್ನು ಸ್ಫೋಟಿಸಿದ್ದರಿಂದ ಇಸ್ರೇಲ್ ಪಡೆಯ ಸದಸ್ಯರು ಸತ್ತರು ಮತ್ತು ಕೆಲವರು ಗಾಯಗೊಂಡರು’ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೇಲ್‌ನ ಪ್ರತೀಕಾರದ ಮಿಲಿಟರಿ ಕಾರ್ಯಾಚರಣೆಯಿಂದ ಗಾಜಾದಲ್ಲಿ 37,124 ಮಂದಿ ಹತರಾಗಿದ್ದಾರೆ. ಇದರಲ್ಲಿ ಬಹುತೇಕರು ನಾಗರಿಕರು ಎಂದು ಹಮಾಸ್ ನಿಯಂತ್ರಿತ ಪ್ರದೇಶದ ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.