ADVERTISEMENT

ಮುಂಬೈ ಮೇಲಿನ ದಾಳಿಕೋರರಿಗೆ ಶಿಕ್ಷೆ ವಿಧಿಸಲು ಇಸ್ರೇಲ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 11:08 IST
Last Updated 26 ನವೆಂಬರ್ 2019, 11:08 IST
   

ಜೆರುಸಲೇಂ : ಮುಂಬೈ ಮೇಲೆ 2008ರ ನವೆಂಬರ್‌ 26 ರಂದು ಭಯೋತ್ಪಾದಕ ದಾಳಿ ನಡೆಸಿದ ಉಗ್ರರಿಗೆ ಮತ್ತು ಅವರಿಗೆ ಸಹಾಯ ಮಾಡಿದವರಿಗೆ ಶಿಕ್ಷೆ ವಿಧಿಸಬೇಕು ಎಂದು ಇಸ್ರೇಲ್‌ ಪಾಕಿಸ್ತಾನವನ್ನು ಆಗ್ರಹಿಸಿದೆ.

ಪಾಕಿಸ್ತಾನ ಮೂಲದ ಲಷ್ಕರ್‌ ಎ ತಯಬಾ ಸಂಘಟನೆಯ 10 ಮಂದಿ ಉಗ್ರರು ನಡೆಸಿದ ಈ ಭಯಾನಕ ದಾಳಿಯಲ್ಲಿ 166 ಮಂದಿ ಮೃತಪಟ್ಟು, 300 ಮಂದಿ ಗಾಯಗೊಂಡಿದ್ದರು.

‘ಈ ದಾಳಿಯಲ್ಲಿ ಆರು ಮಂದಿ ಇಸ್ರೇಲ್‌ ಪ್ರಜೆಗಳು ಸಹ ಮೃತಪಟ್ಟಿದ್ದರು. ಮೃತಪಟ್ಟವರಿಗೆ ಗೌರವ ಸಲ್ಲಿಸಲು ಭಾರತದ ಜತೆಗಿದ್ದೇವೆ’ ಎಂದು ವಿದೇಶಾಂಗ ಸಚಿವಾಲಯದ ಉಪ ಮಹಾನಿರ್ದೇಶಕ ಗಿಲಾಡ್‌ ಕೊಹೆನ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಪಾಕಿಸ್ತಾನ ಸೇರಿದಂತೆ ಎಲ್ಲ ರಾಷ್ಟ್ರಗಳು ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸಬೇಕು. ಮುಂಬೈ ಮೇಲಿನ ದಾಳಿಕೋರರಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಕಠಿಣ ಶಿಕ್ಷೆಗೆ ಒತ್ತಾಯ (ವಾಷಿಂಗ್ಟನ್‌ ವರದಿ): ಮುಂಬೈ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರನ್ನು ಸ್ಮರಿಸಿರುವ ಅಮೆರಿಕ, ಈ ದಾಳಿಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದೆ.

‘ಈ ದಾಳಿಯಲ್ಲಿ ಅಮೆರಿಕದಆರು ನಾಗರಿಕರು ಮೃತಪಟ್ಟಿದ್ದರು. ದಾಳಿಯಲ್ಲಿ ಮೃತಪಟ್ಟವರೆಲ್ಲರ ಕುಟುಂಬದವರ ಜತೆಗಿದ್ದು, ಉಗ್ರರಿಗೆ ಶಿಕ್ಷೆ ವಿಧಿಸಲು ಒತ್ತಾಯಿಸುತ್ತೇವೆ’ ಎಂದು ವಿದೇಶಾಂಗ ಇಲಾಖೆ ವಕ್ತಾರರಾದಮೋರ್ಗನ್ ಒರ್ಟಗಸ್ ಹೇಳಿದ್ದಾರೆ.

ಇಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿ ಎದುರು ಅಮೆರಿಕದಲ್ಲಿರುವ ಭಾರತೀಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ, ದಾಳಿಗೆ ಕಾರಣರಾದವರನ್ನು ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.