ADVERTISEMENT

ಅಧಿಕಾರ ಹೋದರೂ ಪ್ರಧಾನಿ ಕುರ್ಚಿಯಲ್ಲಿ ಕುಳಿತ ಇಸ್ರೇಲ್ ಮಾಜಿ ಪ್ರಧಾನಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2021, 11:25 IST
Last Updated 15 ಜೂನ್ 2021, 11:25 IST
ಬೆಂಜಮಿನ್ ನೇತನ್ಯಾಹು, ಚಿತ್ರ–ಎಎಫ್‌ಪಿ
ಬೆಂಜಮಿನ್ ನೇತನ್ಯಾಹು, ಚಿತ್ರ–ಎಎಫ್‌ಪಿ   

ಬೆಂಗಳೂರು: ಸತತ 12 ವರ್ಷ ಅಧಿಕಾರ ಚಲಾಯಿಸಿ ಪಟ್ಟ ಕಳೆದುಕೊಂಡಿರುವ ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ವಿಡಿಯೋ ಒಂದು ವೈರಲ್ ಆಗಿದೆ.

ನೂತನ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಭಾನುವಾರ ಸಂಸತ್ ಭವನದಲ್ಲಿ ಅಧಿಕಾರ ಸ್ವೀಕರಿಸುವಾಗ ಅಲ್ಲಿಗೆ ಬಂದ ನೇತನ್ಯಾಹು ಅವರು, ಆಕಸ್ಮಿಕವಾಗಿ ಪ್ರಧಾನಿ ಕುಳಿತುಕೊಳ್ಳುವ ಕುರ್ಚಿಯಲ್ಲಿ ಕುಳಿತುಕೊಂಡರು.

ಈ ವೇಳೆ ಅವರ ಆಪ್ತರೊಬ್ಬರು ಪ್ರಮಾದವನ್ನು ಗಮನಿಸಿ, ನೇತನ್ಯಾಹುರನ್ನು ಎಚ್ಚರಿಸಿದರು. ಬಳಿಕ ಅವರಿಗೆ ಮೀಸಲಾಗಿದ್ದ ಆಸನದಲ್ಲಿ ಕುಳಿತಕೊಂಡರು. ಈ ವಿಡಿಯೋವನ್ನುBloomberg Quicktake ಎಂಬ ಮಾಧ್ಯಮ ಸಂಸ್ಥೆ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ADVERTISEMENT

ಬೆಂಜಮಿನ್‌ ನೇತನ್ಯಾಹು ಅವರನ್ನು ಭಾನುವಾರ ಅಧಿಕಾರದಿಂದ ಪದಚ್ಯುತಗೊಳಿಸಲಾಗಿದ್ದು, ನಫ್ತಾಲಿ ಬೆನೆಟ್‌ ಅವರು ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ನೇತನ್ಯಾಹು ಬೆಂಬಲಿಗರ ಗದ್ದಲದ ನಡುವೆಯೇ, ಅವರ ಪದಚ್ಯುತಿಗೆ 120 ಸದಸ್ಯ ಬಲದ ಇಸ್ರೇಲ್‌ ಸಂಸತ್‌ ಅನುಮೋದನೆ ನೀಡಿತು. ಇದರೊಂದಿಗೆ 12 ವರ್ಷಗಳ ನೇತನ್ಯಾಹು ಯುಗ ಅಂತ್ಯಗೊಂಡಿದೆ.

ಹೊಸ ಪ್ರಧಾನಿ ಬೆನೆಟ್‌ ಅವರು ಮಾಜಿ ಪ್ರಧಾನಿ ನೇತನ್ಯಾಹು ಅವರಿಗೆ ಒಂದು ಕಾಲದ ಆಪ್ತರು. ಆದರೆ, ಈಗ ಅವರೇ ಪ್ರಧಾನಿ ಹುದ್ದೆಗೇರಿದ್ದಾರೆ. ಅವರು ಸೈದ್ಧಾಂತಿಕವಾಗಿ ವಿಭಿನ್ನ ನಿಲುವುಗಳನ್ನು ಹೊಂದಿರುವ ಎಡಪಂಥೀಯ, ಬಲಪಂಥೀಯ, ಅರಬ್‌ ಪಕ್ಷಗಳ ಮೈತ್ರಿಕೂಟದ ನಾಯಕರಾಗಿದ್ದಾರೆ. ಹಣಕಾಸು ಸಚಿವ, 51 ವರ್ಷದ ಯೇರ್ ಲ್ಯಾಪಿಡ್ ಅವರು ಬೆನೆಟ್‌ ಅವರಿಗೆ ಪರ್ಯಾಯ ಪ್ರಧಾನಿಯಾಗಿದ್ದಾರೆ. 2023ರಲ್ಲಿ ಅವರಿಗೆ ಪ್ರಧಾನಿ ಹುದ್ದೆ ಹಸ್ತಾಂತರ ಮಾಡುವ ಮಾತುಕತೆ ಮೈತ್ರಿಕೂಟದಲ್ಲಿ ನಡೆದಿದೆ.

ಬೆನೆಟ್ ಮತ್ತು ಲ್ಯಾಪಿಡ್ ಎಂಟು ಪಕ್ಷಗಳ ಮೈತ್ರಿಕೂಟದ ನೇತೃತ್ವ ವಹಿಸಿಕೊಂಡಿದ್ದಾರೆ. ಈ ಕೂಟದಲ್ಲಿ ಎಡ, ಬಲ, ಜಾತ್ಯತೀತ ಮತ್ತು ಧಾರ್ಮಿಕ ಪಕ್ಷಗಳೂ ಇವೆ. ನೇತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಒಂದೇ ಉದ್ದೇಶದಿಂದ ಈ ಎಲ್ಲ ಪಕ್ಷಗಳು ಒಟ್ಟುಗೂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.