ADVERTISEMENT

Israel -Gaza Conflict | ಮುಕ್ಕಾಲು ಪಾಲು ಗಾಜಾ ನಗರ ಸುತ್ತುವರಿದ ಇಸ್ರೇಲ್‌

ನಿರ್ಧಾರ ಕ್ರಮ ಕೈಗೊಳ್ಳಿ: ಮಾನವೀನ ಸಹಕಾರ ನೀಡುವ ಸಂಸ್ಥೆಗಳಿಂದ ಕರೆ * ದಾಳಿಗೆ 16 ಬಲಿ

ಏಜೆನ್ಸೀಸ್
Published 17 ಸೆಪ್ಟೆಂಬರ್ 2025, 14:28 IST
Last Updated 17 ಸೆಪ್ಟೆಂಬರ್ 2025, 14:28 IST
<div class="paragraphs"><p>ಇಸ್ರೇಲ್‌ ಕಡೆಯ ಗಡಿಯಿಂದ ಸೆರೆಹಿಡಿದ ಗಾಜಾಪಟ್ಟಿಯಲ್ಲಿನ ಸ್ಥಿತಿ</p></div>

ಇಸ್ರೇಲ್‌ ಕಡೆಯ ಗಡಿಯಿಂದ ಸೆರೆಹಿಡಿದ ಗಾಜಾಪಟ್ಟಿಯಲ್ಲಿನ ಸ್ಥಿತಿ

   

ಜೆರುಸೆಲೇಂ/ಅಡನ್‌: ಗಾಜಾ ನಗರದ ಕರಾವಳಿ ಭಾಗದ ದೊಡ್ಡ ಪ್ರದೇಶವೊಂದನ್ನು ಹೊರತುಪಡಿಸಿ ಉಳಿದ ಬಹುಭಾಗವನ್ನು ಇಸ್ರೇಲ್‌ ಸೇನೆಯು ಸುತ್ತುವರಿದಿದೆ. ಒಂದೆಡೆ, ಸಾವಿರಾರು ಪ್ಯಾಲೆಸ್ಟೇನಿಯನ್ನರು ನಗರವನ್ನು ತೊರೆಯುತ್ತಿದ್ದರೆ ಇನ್ನೊಂದೆಡೆ, ಇಸ್ರೇಲ್‌ ಭೂಸೇನೆಯು ಎರಡನೇ ದಿನವೂ ತನ್ನ ದಾಳಿಯನ್ನು ಮುಂದುವರಿಸಿದೆ.

ಇಸ್ರೇಲ್‌ನ ಭೂಸೇನೆಯು ಗಾಜಾ ನಗರದ ಮೇಲೆ ನಡೆಸುತ್ತಿರುವ ತೀವ್ರ ದಾಳಿಗೆ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಅರ್ಧದಷ್ಟು ಜನರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಗಾಜಾದ ಆಸ್ಪತ್ರೆಯಲ್ಲಿದ್ದ 80 ರೋಗಿಗಳಿಗೆ ಈ ದಾಳಿಯ ಕಾರಣದಿಂದ ಹೊರಹೋಗುವಂತೆ ಹೇಳಲಾಗಿದೆ.

ಆಹಾರ, ನೀರು, ಔಷಧ ಸೇರಿದಂತೆ ಗಾಜಾ ಜನರಿಗೆ ಮೂಲಸೌಲಭ್ಯ, ನೆರವು ಒದಗಿಸುತ್ತಿರುವ ಅಂತರರಾಷ್ಟ್ರೀಯ ಮಟ್ಟದ ಸುಮಾರು 20 ಸಂಸ್ಥೆಗಳು ದಾಳಿಯನ್ನು ಕಟು ಮಾತುಗಳಲ್ಲಿ ಖಂಡಿಸಿವೆ. ‘ಭೂಸೇನೆಯ ಕಾರ್ಯಾಚರಣೆಯು ನರಮೇಧದ ಯುದ್ಧವನ್ನು ವಿಸ್ತರಿಸಿದಂತೆ’ ಎಂದಿರುವ ಕತಾರ್‌, ಇಸ್ರೇಲ್‌ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.

‘ಕಳೆದ ಕೆಲವು ದಿನಗಳಲ್ಲಿ ಗಾಜಾ ನಗರದ ಎತ್ತರದ ಕಟ್ಟಡಗಳನ್ನು ಗುರಿಯಾಗಿಸಿ ಸುಮಾರು 150ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದೇವೆ’ ಎಂದು ಇಸ್ರೇಲ್‌ ಹೇಳಿಕೊಂಡಿದೆ. ಈ ಕಟ್ಟಡಗಳಲ್ಲಿ ಸಾವಿರಾರು ಪ್ಯಾಲೆಸ್ಟೇನಿಯನ್ನರು ಆಶ್ರಯ‍ ಪಡೆದುಕೊಂಡಿದ್ದರು. ‘ಕಣ್ಗಾವಲು ನಡೆಸಲು ಹಮಾಸ್‌ ಬಂಡುಕೋರರು ಇಂಥ ಕಟ್ಟಡಗಳನ್ನು ಬಳಸಿಕೊಳ್ಳುತ್ತಾರೆ’ ಎಂದು ಇಸ್ರೇಲ್‌ ದೂರಿದೆ.

ದಕ್ಷಿಣಕ್ಕೆ ತೆರಳಲು ಎಚ್ಚರಿಕೆ: ಉತ್ತರ ಗಾಜಾದಿಂದ ದಕ್ಷಿಣ ಗಾಜಾಗೆ ತೆರಳುವಂತೆ ಇಸ್ರೇಲ್‌ ಸೇನೆ ಈಗಾಗಲೇ ಎಚ್ಚರಿಕೆ ನೀಡಿದೆ. ಇದಕ್ಕಾಗಿ ಇನ್ನೊಂದು ಹೊಸ ಮಾರ್ಗವನ್ನು ತೆರೆದಿದೆ. ‘ಈ ಮಾರ್ಗವು ಬುಧವಾರ ಸಂಜೆಯಿಂದ ಆರಂಭಗೊಂಡು ಎರಡು ದಿನ ತೆರೆದಿರಲಿದೆ’ ಎಂದು ಇಸ್ರೇಲ್‌ ತಿಳಿಸಿದೆ.

ದೂರಸಂಪರ್ಕ ಸಂಪೂರ್ಣ ಕಡಿತ: ‘ಉತ್ತರ ಗಾಜಾದ ಮುಖ್ಯ ದೂರಸಂಪರ್ಕ ಮೂಲಸೌರ್ಕಯದ ಮೇಲೆ ಇಸ್ರೇಲ್‌ ಸೇನೆಯು ನಿರಂತರವಾಗಿ ದಾಳಿ ನಡೆಸುತ್ತಿದೆ. ಇದರಿಂದಾಗಿ ಬುಧವಾರ ಬೆಳಿಗ್ಗೆಯಿಂದ ಇಲ್ಲಿನ ದೂರವಾಣಿ ಸಂಪರ್ಕ ಮತ್ತು ಅಂತರ್ಜಾಲ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ’ ಎಂದು ಪ್ಯಾಲೆಸ್ಟೇನ್‌ ದೂರಸಂಪರ್ಕ ಪ್ರಾಧಿಕಾರ ಹೇಳಿದೆ.

  • 10 ಲಕ್ಷ; ಗಾಜಾ ನಗರದಲ್ಲಿ ವಾಸಿಸುತ್ತಿರುವವರ ಸಂಖ್ಯೆ

  • 3.50 ಲಕ್ಷ; ಇಸ್ರೇಲ್‌ ಸೇನೆ ಪ್ರಕಾರ ಗಾಜಾ ನಗರವನ್ನು ತೊರದವರ ಸಂಖ್ಯೆ

  • 2.38 ಲಕ್ಷ; ವಿಶ್ವ ಸಂಸ್ಥೆ ಅಂದಾಜಿಸಿದಂತೆ ಗಾಜಾ ನಗರವನ್ನು ತೊರದವರ ಸಂಖ್ಯೆ

  • 2 ಸಾವಿರ– 3 ಸಾವಿರ; ಇಸ್ರೇಲ್‌ ಸೇನೆ ಪ್ರಕಾರ ಗಾಜಾ ನಗರದಲ್ಲಿ ಇನ್ನೂ ಉಳಿದುಕೊಂಡಿರುವ ಹಮಾಸ್‌ ಬಂಡುಕೋರರ ಸಂಖ್ಯೆ

‘ಕೇವಲ ಹೇಳಿಕೆಯಿಂದ ಪ್ರಯೋಜನವಿಲ್ಲ’

ಗಾಜಾದಲ್ಲಿ ನಡೆಯುತ್ತಿರುವ ಅತ್ಯಂತ ದೊಡ್ಡ ಮಾನವೀಯ ದುರಂತವನ್ನು ತಡೆಯಲು ಇತರ ದೇಶಗಳು ತಮ್ಮೆಲ್ಲಾ ರಾಜಕೀಯ ಆರ್ಥಿಕ ಮತ್ತು ಕಾನೂನಾತ್ಮಕ ತಂತ್ರವನ್ನು ಬಳಸಿಕೊಳ್ಳಬೇಕು. ದಾಳಿ ಖಂಡಿಸಿ ಹೇಳಿಕೆ ಕೊಡುವುದರಿಂದ ಅರ್ಧಂಬರ್ಧ ಪರಿಣಾಮ ಬೀರುವ ಕ್ರಮಗಳಿಂದ ಪ್ರಯೋಜನವಿಲ್ಲ. ಇದಕ್ಕೊಂದು ನಿರ್ಣಾಯಕ ಕ್ರಮದ ಅಗತ್ಯವಿದೆ ಮಾನವೀಯ ಸಹಕಾರ ಒದಗಿಸುವ ಸಂಸ್ಥೆಗಳು

‘ಹುಥಿ ವಾಯು ಪ್ರದೇಶ ಸನ್ನದ್ದ’

ಇರಾನ್‌ ಬೆಂಬಲಿತ ಹುಥಿ ಬಂಡುಕೋರರು ಸಕ್ರಿಯವಾಗಿರುವ ಬಂದರಿನ ಮೇಲೆ ಇಸ್ರೇಲ್‌ ಮಂಗಳವಾರ ದಾಳಿ ನಡೆಸಿತ್ತು. ಬಳಿಕ ಬಂಡುಕೋರರು ತಮ್ಮ ವಾಯು ರಕ್ಷಣಾ ವ್ಯವಸ್ಥೆಯನ್ನು ಸನ್ನದ್ದ ಸ್ಥಿತಿಯಲ್ಲಿ ಇರಿಸಿದ್ದಾರೆ.  ‘ಹೊಡೇಡ ಬಂದರಿನಲ್ಲಿ ಬಂಡುಕೋರರು ಸೇನಾ ಮೂಲಸೌಕರ್ಯವೊಂದನ್ನು ಸ್ಥಾಪಿಸಿಕೊಂಡಿದ್ದರು. ನಾವು ಇದರ ಮೇಲೆ ದಾಳಿ ನಡೆಸಿದ್ದೇವೆ. ಇದೇ ಬಂದರಿನ ಮೂಲಕ ಇರಾನ್‌ನಿಂದ ಶಸ್ತ್ರಾಸ್ತ್ರಗಳು ಬಂಡುಕೋರರನ್ನು ತಲುಪುತ್ತಿವೆ. ಈ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ ಮತ್ತು ಅದರ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಬಳಸಿಕೊಳ್ಳಲಾಗುತ್ತದೆ’ ಎಂದು ಇಸ್ರೇಲ್‌ ಸೇನೆ ಹೇಳಿದೆ. ‘ಇಸ್ರೇಲ್‌ನ ಯುದ್ಧ ವಿಮಾನಗಳನ್ನು ನಾವು ಶಕ್ತಿಯುತವಾಗಿಯೇ ಎದುರಿಸುತ್ತಿದ್ದೇವೆ. ಇಸ್ರೇಲ್‌ನವರಿಗೆ ನಾವು ಚಳ್ಳೆಹಣ್ಣು ತಿನ್ನಿಸುತ್ತಿದ್ದೇವೆ. ನಾವು ಅವರಲ್ಲಿ ಗೊಂದಲ ಮೂಡುವಂತೆ ಮಾಡಿ ದಾಳಿ ಮಾಡುವ ಮುನ್ನವೇ ನಮ್ಮ ವಾಯುಪ್ರದೇಶವನ್ನು ಬಿಟ್ಟು ಹೋಗುವಂತೆ ಮಾಡುತ್ತಿದ್ದೇವೆ’ ಎಂದು ಹುಥಿ ಬಂಡುಕೋರ ಸಂಘಟನೆಯ ವಕ್ತಾರ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.