
ನಹಾರಿಯಾ, ಇಸ್ರೇಲ್: ಗಾಜಾದಲ್ಲಿ ಸಿಲುಕಿಕೊಂಡಿರುವ ಕೊನೆಯ ಒತ್ತೆಯಾಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಇಸ್ರೇಲ್ ಸೇನೆಯು ಭಾನುವಾರ ರಾತ್ರಿಯಿಂದಲೇ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ. ಮತ್ತೊಂದೆಡೆ, ಹಮಾಸ್ ಜೊತೆಗೆ ಮುಂದಿನ ಹಂತದ ಕದನ ವಿರಾಮ ಸಂಬಂಧ ಅಮೆರಿಕ ಹಾಗೂ ಇತರೆ ದೇಶಗಳು ಇಸ್ರೇಲ್ ಮೇಲೆ ಒತ್ತಡ ಹೇರುವ ತಂತ್ರವನ್ನು ಮುಂದುವರಿಸಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗೆ ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳು ಸಭೆ ನಡೆಸಿದ ಬೆನ್ನಲ್ಲೇ, ಈಜಿಪ್ಟ್‌ನೊಂದಿಗೆ ಸಂಪರ್ಕ ಕಲ್ಪಿಸುವ ಗಾಜಾ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಫಾ ಗಡಿ ತೆರೆಯುವ ಸಾಧ್ಯತೆ ಕುರಿತಂತೆ ಇಸ್ರೇಲ್‌ನ ಸಚಿವ ಸಂಪುಟವು ಚರ್ಚೆ ನಡೆಸಿದೆ.
ಗಾಜಾದ ಪಾದಯಾತ್ರಿಗಳಿಗೆ ಮಾತ್ರ ರಫಾ ಗಡಿ ಭಾಗ ತೆರೆಯಲು ಇಸ್ರೇಲ್ ಒಪ್ಪಿಗೆ ಸೂಚಿಸಿದೆ.
ಮೊದಲ ಹಂತದ ಕದನ ವಿರಾಮದ ಪ್ರಕಾರ, ಅಕ್ಟೋಬರ್ 10ರ ಒಳಗಾಗಿ ಇಸ್ರೇಲ್‌ನ ಎಲ್ಲ ಒತ್ತೆಯಾಳುಗಳನ್ನು ಜೀವಂತ ಅಥವಾ ಶವವಾಗಿ ಹಸ್ತಾಂತರಿಸಬೇಕು ಎಂದು ಹಮಾಸ್ ಜೊತೆಗೆ ಒಪ್ಪಂದವಾಗಿತ್ತು. ಆದರೆ, ಬಾಕಿ ಉಳಿದ ಒತ್ತೆಯಾಳು ರಣ್ ಗ್ವಿಲಿ ಕುರಿತಂತೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರ ಪತ್ತೆಗಾಗಿ ಇಸ್ರೇಲ್ ಸೇನೆಯೂ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ತನ್ನ ಹಿಡಿತದಲ್ಲಿರುವ ಉತ್ತರ ಗಾಜಾದ ಸ್ಮಶಾನದಲ್ಲಿ ಹುಡುಕಾಟ ಮುಂದುವರಿಸಿದೆ.
‘ರಣ್ ಗ್ವಿಲಿಯನ್ನು ಶುಜಯ್ಯಾ–ದರಾಜ್–ತುಫಾ ಪ್ರದೇಶದಲ್ಲಿರುವ ಸ್ಮಶಾನದಲ್ಲಿ ಹೂತುಹಾಕಿರುವ ಸಾಧ್ಯತೆಯಿದ್ದು, ದಂತ ತಜ್ಞರನ್ನು ಒಳಗೊಂಡ ವಿಶೇಷ ತಂಡವು ಸ್ಥಳದಲ್ಲಿ ಶೋಧಕಾರ್ಯ ಮುಂದುವರಿಸಿದೆ. ಅಂತಿಮ ಒತ್ತೆಯಾಳು ಬಿಡುಗಡೆಯಾಗುವವರೆಗೂ ಇಸ್ರೇಲ್ ಸರ್ಕಾರವು ಎರಡನೇ ಹಂತದ ಕದನ ವಿರಾಮಕ್ಕೆ ಮುಂದಾಗಬಾರದು’ ಎಂದು ಗ್ವಿಲಿಯ ಕುಟುಂಬದ ಸದಸ್ಯರು ಪ್ರಧಾನಿ ನೆತನ್ಯಾಹು ಅವರನ್ನು ಒತ್ತಾಯಿಸಿದ್ದಾರೆ.
ಇದರ ಹೊರತಾಗಿಯೂ ಇಸ್ರೇಲ್ ಮೇಲೆ ಅಮೆರಿಕವು ಹೆಚ್ಚಿನ ಒತ್ತಡ ಹೇರುವುದನ್ನು ಮುಂದುವರಿಸಿದ್ದು, ಎರಡನೇ ಹಂತದ ಕದನ ವಿರಾಮವು ಈಗಾಗಲೇ ಜಾರಿಯಲ್ಲಿದೆ ಎಂದು ತಿಳಿಸಿದೆ.
ವಿಶ್ವಸಂಸ್ಥೆ ಕಚೇರಿಗೆ ಬೆಂಕಿ: ಪೂರ್ವ ಜೆರುಸಲೇಂನ ವಿಶ್ವಸಂಸ್ಥೆಯ ಪ್ಯಾಲೆಸ್ಟೀನ್‌ನ ನಿರಾಶ್ರಿತ ಕೇಂದ್ರದ ಆವರಣ ಗೋಡೆಯನ್ನು ಇಸ್ರೇಲ್ ಸೇನೆಯು ಹೊಡೆದುರುಳಿದ ಮರುದಿನವೇ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಯಾವ ಕಾರಣದಿಂದ ಬೆಂಕಿ ಹಚ್ಚಲಾಯಿತು ಎಂದು ತಿಳಿದುಬಂದಿಲ್ಲ. ಬೆಂಕಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಅಗ್ನಿಶಾಮಕ ಪಡೆಯನ್ನು ಕಳುಹಿಸಿಕೊಡಲಾಗಿತ್ತು ಎಂದು ಇಸ್ರೇಲ್‌ನ ಅಗ್ನಿಶಾಮಕ ಪಡೆಯು ತಿಳಿಸಿದೆ.
ದೇಶದಲ್ಲಿ ಅನಿಶ್ಚಿತತೆ ಮುಂದುವರಿದಿರುವ ಬೆನ್ನಲ್ಲೇ ಇಸ್ರೇಲ್‌ನ ವಿಮಾನಯಾನ ಸಂಸ್ಥೆಗಳಾದ ಎಲ್–ಅಲ್ ಇಸ್ರ್ ಏರ್ ಹಾಗೂ ಅರ್ಕಿಯಾ ವಿಮಾನಯಾನ ಸಂಸ್ಥೆಯು ಸೋಮವಾರ ತನ್ನ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ.
ಇರಾನ್ ಮೇಲೆ ಯಾವುದೇ ಸೇನಾ ಕಾರ್ಯಾಚರಣೆ ನಡೆದರೆ ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಏರ್‌ಲೈನ್ಸ್‌ಗಳು ಈ ಕ್ರಮ ತೆಗೆದುಕೊಂಡಿದೆ. ಟಿಕೆಟ್ ರದ್ದುಗೊಳಿಸಿದ ಗ್ರಾಹಕರಿಗೆ ಮರು ಪಾವತಿ ಹಾಗೂ ಇತರೆ ದಿನಗಳಲ್ಲಿ ಟಿಕೆಟ್ ಖರೀದಿಗೂ ಅವಕಾಶ ನೀಡಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಇಸ್ರೇಲ್ ಹಾಗೂ ಇರಾನ್ ನಡುವೆ ನಡೆದ ಸಂಘರ್ಷದ ವೇಳೆ 12 ದಿನಗಳ ಕಾಲ ಇಸ್ರೇಲ್ ವಾಯುಪ್ರದೇಶವನ್ನು ಬಂದ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.