ಸಾಂದರ್ಭಿಕ ಚಿತ್ರ
ಕೈರೊ: ಯುದ್ಧ ಅಂತ್ಯಗೊಳಿಸಲು ಅಮೆರಿಕವು ಸಿದ್ಧಪಡಿಸಿದ ಶಾಂತಿ ಯೋಜನೆ ಕುರಿತು ಇಸ್ರೇಲ್ ಹಾಗೂ ಹಮಾಸ್ ಬಂಡುಕೋರ ಸಂಘಟನೆಯ ನಿಯೋಗಗಳು ಈಜಿಪ್ಟ್‌ನ ರೆಸಾರ್ಟ್‌ವೊಂದರಲ್ಲಿ ಸೋಮವಾರ ಮಧ್ಯಾಹ್ನದಿಂದ ಮಾತುಕತೆ ಆರಂಭಿಸಿವೆ. ಈಜಿಪ್ಟ್ ಹಾಗೂ ಕತಾರ್ ಮಾತುಕತೆಯ ಮಧ್ಯಸ್ಥಿಕೆ ವಹಿಸಿವೆ.
ಯುದ್ಧವು ಆರಂಭಗೊಂಡು ಅ.7ಕ್ಕೆ ಎರಡು ವರ್ಷ ಪೂರೈಸಲಿದೆ. ಈ ಸಭೆಯಲ್ಲಿ ಅಮೆರಿಕದ ಮಧ್ಯಪ್ರಾಚ್ಯದ ರಾಯಭಾರಿ ಸ್ಟೀವ್ ವಿಟ್‌ಆಫ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜರೆಡ್ ಕುಶ್ನರ್ ಅವರೂ ಭಾಗಿಯಾಗಲಿದ್ದಾರೆ.
ಮೊದಲ ಹಂತದಲ್ಲಿ ಯಾವ ರೀತಿಯಲ್ಲಿ ಕದನವಿರಾಮ ಇರಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ. ಗಾಜಾ ಪಟ್ಟಿಯಿಂದ ಇಸ್ರೇಲ್ ಸೇನೆಯು ಭಾಗಶಃ ವಾಪಸಾಗಬೇಕು. ಇಸ್ರೇಲ್ ವಶದಲ್ಲಿರುವ ಪ್ಯಾಲೆಸ್ಟೀನ್‌ನ ಕೈದಿಗಳ ಬಿಡುಗಡೆಗೆ ಪ್ರತಿಯಾಗಿ ಹಮಾಸ್ ವಶದಲ್ಲಿ ಇರುವ ಇಸ್ರೇಲ್ ಒತ್ತೆಯಾಳುಗಳು ಬಿಡುಗಡೆ ಮಾಡುವುದರ ಕುರಿತೂ ಮಾತುಕತೆ ನಡೆಯಲಿದೆ.
‘ಬೇಗ ಮಾತುಕತೆ ಮುಗಿಸಿ, ಯುದ್ಧ ಅಂತ್ಯಗೊಳಿಸಿ’ ಎಂದು ಟ್ರಂಪ್ ಹೇಳಿದ್ದಾರೆ. ‘ಮಾತುಕತೆಯು ಹೆಚ್ಚು ದಿನ ಮುಂದುವರಿಯುವುದಿಲ್ಲ’ ಎಂದು ಇಸ್ರೇಲ್ ಹೇಳಿದೆ. ಆದರೆ, ‘ಮಾತುಕತೆ ಅಂತ್ಯಕ್ಕೆ ಹೆಚ್ಚು ಸಮಯ ಬೇಕು’ ಎಂದು ಹಮಾಸ್ ಹೇಳಿದೆ.
‘ಮೃತ ಒತ್ತೆಯಾಳುಗಳ ದೇಹಗಳನ್ನು ಎಲ್ಲಿ ಹೂಳಲಾಗಿದೆ ಎಂದು ಪತ್ತೆ ಮಾಡಲು ಕಾಲಾವಕಾಶ ಬೇಕು’ ಎಂದು ಹಮಾಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.