ADVERTISEMENT

ಕುಖ್ಯಾತ ಎವಿನ್ ಜೈಲು ಸಹಿತ ಇರಾನ್ ಸರ್ಕಾರ ಗುರಿಯಾಗಿಸಿ ದಾಳಿ: ಇಸ್ರೇಲ್ ಮಾಹಿತಿ

ಪಿಟಿಐ
Published 23 ಜೂನ್ 2025, 10:58 IST
Last Updated 23 ಜೂನ್ 2025, 10:58 IST
<div class="paragraphs"><p>ಇರಾನ್‌ನ ಟೆಹರಾನ್‌ನಲ್ಲಿರುವ ಎವಿನ್ ಜೈಲು ದಾಳಿಗೆ ಮೊದಲು ಹಾಗೂ ನಂತರ</p></div>

ಇರಾನ್‌ನ ಟೆಹರಾನ್‌ನಲ್ಲಿರುವ ಎವಿನ್ ಜೈಲು ದಾಳಿಗೆ ಮೊದಲು ಹಾಗೂ ನಂತರ

   

ಎಕ್ಸ್ ಚಿತ್ರ

ದುಬೈ: ‘ಟೆಹರಾನ್‌ನಲ್ಲಿರುವ ಕುಖ್ಯಾತ ಎವಿನ್ ಪ್ರಿಸನ್‌ ಸಹಿತ ಇರಾನ್‌ನ ಸರ್ಕಾರವನ್ನೇ ಗುರಿಯಾಗಿಸಿ ನಿರ್ದಿಷ್ಟ ದಾಳಿಯನ್ನು ನಡೆಸಲಾಗುತ್ತಿದೆ’ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ಸೋಮವಾರ ಹೇಳಿದೆ.

ADVERTISEMENT

ಅರೆಸೇನಾ ಕ್ರಾಂತಿಕಾರಿ ಭದ್ರತಾಪಡೆಯ ಪ್ರಧಾನ ಕಚೇರಿಯನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ದಾಳಿ ನಡೆಸಿದೆ. ಇದರಲ್ಲಿ ಬಸಿಜ್‌ ಸ್ವಯಂಸೇವಕ ಪಡೆಯ ಕಟ್ಟಡವೂ ಸೇರಿದೆ. 

‘ಇಸ್ರೇಲ್‌ನ ನಾಗರಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿದ ಇರಾನ್‌ನ ಸರ್ವಾಧಿಕಾರಿಯನ್ನು ಸಂಪೂರ್ಣ ಸೇನಾ ದಾಳಿಯ ಮೂಲಕವೇ ಶಿಕ್ಷಿಸಲಾಗುವುದು’ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ಹೇಳಿದೆ.

ಆದರೆ ಇದೊಂದು ವಿಫಲ ದಾಳಿ ಎಂದು ಇರಾನ್‌ ಸೇನೆ ಹೇಳಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ‘ಜೂಜುಕೋರ’ ಎಂದು ಕರೆದಿರುವ ಇರಾನ್, ‘ನೀವು ಆರಂಭಿಸಿರುವ ಯುದ್ಧವನ್ನು ನಾವು ಕೊನೆಗೊಳಿಸುತ್ತೇವೆ’ ಎಂದು ಆಕ್ರೋಶ ಹೊರಹಾಕಿದೆ.

ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸುವ ಕುರಿತು ಶೀಘ್ರವೇ ನಿರ್ಧರಿಸಲಾಗುವುದು ಎಂದು ಹೇಳುತ್ತಿದ್ದ ಅಮೆರಿಕ, ಶನಿವಾರ ತಡರಾತ್ರಿ ಇರಾನ್‌ನ ಮೂರು ಪ್ರಮುಖ ಪರಮಾಣು ಘಟಕಗಳ ಮೇಲೆ ಭಾರಿ ಬಾಂಬ್‌ ದಾಳಿ ನಡೆಸಿತ್ತು.

‘ಆಪರೇಷನ್‌ ಮಿಡ್‌ನೈಟ್‌ ಹ್ಯಾಮರ್’ ಹೆಸರಿನ ಸೇನಾ ಕಾರ್ಯಾಚರಣೆ ನಡೆಸುವ ಮೂಲಕ, ಇರಾನ್‌ ವಿರುದ್ಧ ಇಸ್ರೇಲ್‌ ಸಾರಿರುವ ಯುದ್ಧವನ್ನು ಅಮೆರಿಕ ಅಧಿಕೃತವಾಗಿ ಪ್ರವೇಶಿಸಿದಂತಾಗಿದೆ.

‘ಇರಾನ್‌ನ ಫೋರ್ಡೊ, ನಟಾನ್ಜ್ ಹಾಗೂ ಎಸ್‌ಫಹಾನ್‌ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ನಡೆಸಿದ ದಾಳಿ ಯಶಸ್ವಿಯಾಗಿದೆ’ ಎಂದು ಟ್ರಂಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.