ADVERTISEMENT

Israel–Iran Conflict: ಭಾರತ ಸೇರಿದಂತೆ ವಿವಿಧ ದೇಶಗಳ ನಾಗರಿಕರ ಸ್ಥಳಾಂತರ ಆರಂಭ

ರಾಯಿಟರ್ಸ್
Published 20 ಜೂನ್ 2025, 4:13 IST
Last Updated 20 ಜೂನ್ 2025, 4:13 IST
<div class="paragraphs"><p>ಸಂಘರ್ಷಪೀಡಿತ ಇಸ್ರೇಲ್‌ನಿಂದ ಸ್ಥಳಾಂತರಗೊಳ್ಳಲು ಎದುರು ನೋಡುತ್ತಿರುವ ವಿವಿಧ ರಾಷ್ಟ್ರಗಳ ನಾಗರಿಕರು</p></div>

ಸಂಘರ್ಷಪೀಡಿತ ಇಸ್ರೇಲ್‌ನಿಂದ ಸ್ಥಳಾಂತರಗೊಳ್ಳಲು ಎದುರು ನೋಡುತ್ತಿರುವ ವಿವಿಧ ರಾಷ್ಟ್ರಗಳ ನಾಗರಿಕರು

   

ರಾಯಿಟರ್ಸ್ ಚಿತ್ರ

ನವದೆಹಲಿ/ಟೆಲ್‌ ಅವಿವ್‌/ ಟೆಹರಾನ್‌: ಇಸ್ರೇಲ್‌ ಹಾಗೂ ಇರಾನ್‌ ನಡುವಣ ಸಂಘರ್ಷ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಆ ದೇಶಗಳಲ್ಲಿರುವ ತಮ್ಮ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯವನ್ನು ಭಾರತ ಸೇರಿದಂತೆ ವಿವಿಧ ದೇಶಗಳು ಆರಂಭಿಸಿವೆ. ವಾಯು ಪ್ರದೇಶ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ, ಪರ್ಯಾಯ ಮಾರ್ಗಗಳನ್ನು ಆಶ್ರಯಿಸಿವೆ.

ADVERTISEMENT

ಇರಾನ್‌ ಸೇನಾ ನೆಲೆ, ವಸತಿ ಪ್ರದೇಶಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ನಡೆಸುತ್ತಿದೆ. ಇದರಿಂದಾಗಿ ನೂರಾರು ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್‌ ನಡೆಸುತ್ತಿರುವ ದಾಳಿಯಲ್ಲಿ ಈವರೆಗೆ ಹತ್ತಕ್ಕೂ ಹೆಚ್ಚು ಸಾವು ಸಂಭವಿಸಿವೆ.

ಇರಾನ್‌ನಿಂದ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ 'ಆಪರೇಷನ್‌ ಸಿಂಧು' ಆರಂಭಿಸಿರುವ ಭಾರತ, ಜೂನ್‌ 17ರಂದು ಅರ್ಮೇನಿಯಾ ತಲುಪಿದ್ದ 110 ವಿದ್ಯಾರ್ಥಿಗಳನ್ನು ಕರೆತಂದಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಇರಾನ್‌ನಲ್ಲಿದ್ದ 17 ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಅವರ ಕುಟುಂಬದವರನ್ನು ಅಜರ್‌ಬೈಜಾನ್‌ಗೆ ಸ್ಥಳಾಂತರಿಸಿರುವ ಬಲ್ಗೇರಿಯಾ, ತನ್ನ ಜನರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನ ಮುಂದುವರಿಸಿದೆ. ಇಸ್ರೇನ್‌ನಲ್ಲಿರುವ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಬಾಕು ನಗರಕ್ಕೆ (ಅಜರ್‌ಬೈಜಾನ್‌ ರಾಜಧಾನಿ) ಸ್ಥಳಾಂತರಿಸಿದೆ.

ಇರಾನ್‌ನಿಂದ 1,600ಕ್ಕೂ ಹೆಚ್ಚು ಮತ್ತು ಇಸ್ರೇಲ್‌ನಿಂದ ನೂರಾರು ನಾಗರಿಕರನ್ನು ಸ್ಥಳಾಂತರಿಸಿರುವುದಾಗಿ ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.

ಟೆಲ್ ಅವಿವ್ (ಇರಾನ್‌) ಮತ್ತು ಟೆಹರಾನ್‌ನಲ್ಲಿ (ಇಸ್ರೇಲ್‌) ಇರುವ ರಾಜತಾಂತ್ರಿಕ ಅಧಿಕಾರಿಗಳು, ರಾಯಭಾರ ಕಚೇರಿ ಸಿಬ್ಬಂದಿ ಭೂ ಮಾರ್ಗದ ಮೂಲಕವೇ ದೇಶಕ್ಕೆ ವಾಪಸ್‌ ಆಗುವ ಸಾಧ್ಯತೆ ಇದೆ ಎಂದು ಕ್ರೊಯೇಷ್ಯಾ ವಿದೇಶಾಂಗ ಸಚಿವ ಗೋರ್ಡಾನ್ ಗ್ರಿಲಿಕ್ ರಾಡ್‌ಮನ್ ಹೇಳಿದ್ದಾರೆ.

ಇರಾನ್‌ನಲ್ಲಿರುವ ಫ್ರಾನ್ಸ್‌ ನಾಗರಿಕರನ್ನು ಟರ್ಕಿ ಅಥವಾ ಅರ್ಮೇನಿಯಾ ಗಡಿ ಪ್ರದೇಶಗಳಿಗೆ ಕರೆತರಲಾಗುವುದು. ನಂತರ, ಆ ದೇಶಗಳ ವಿಮಾನಗಳ ಮೂಲಕವೇ ದೇಶಕ್ಕೆ ಕರೆಸಿಕೊಳ್ಳಲಾಗುವುದು. ಇಸ್ರೇಲ್‌ನಲ್ಲಿ ಇರುವವರು ಜೋರ್ಡನ್‌ ಗಡಿಯಿಂದ ಜೋರ್ಡಾನ್‌ ವಿಮಾನ ನಿಲ್ದಾಣಗಳತ್ತ ಶುಕ್ರವಾರ (ಜೂನ್‌ 20) ಬಸ್‌ ಏರಲಿದ್ದಾರೆ. ಅಲ್ಲಿಂದ ದೇಶಕ್ಕೆ ಮರಳಲಿದ್ದಾರೆ ಎಂದು ಫ್ರಾನ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರೀಸ್‌ ತನ್ನ 16 ನಾಗರಿಕರು ಮತ್ತು ಅವರ ಕುಟುಂಬದವರನ್ನು ಇರಾನ್‌ನಿಂದ ಅಜರ್‌ಬೈಜಾನ್‌ಗೆ ಸ್ಥಳಾಂತರಿಸಿದೆ.

ಇಸ್ರೇಲ್‌ನಲ್ಲಿ ನೆಲೆಸಿರುವ ಸುಮಾರು 20,000 ನಾಗರಿಕರನ್ನು ಅಮಾನ್‌ನಿಂದ ಕರೆತರಲು ಇಟಲಿ ಕಾರ್ಯಪ್ರವೃತ್ತವಾಗಿದೆ.

ಸಂಘರ್ಷಪೀಡಿತ ರಾಷ್ಟ್ರಗಳಲ್ಲಿರುವ ತನ್ನ ನಾಗರಿಕರು ನೆರೆ ರಾಷ್ಟ್ರಗಳಿಗೆ ತೆರಳಲು ರಾಯಭಾರ ಕಚೇರಿಗಳು ನೆರವಾಗುತ್ತಿವೆ. ಎರಡು ಸ್ವರಕ್ಷಣಾ ಪಡೆಗಳನ್ನು ನಿಯೋಜಿಸಲಾಗುವುದು ಎಂದು ಜಪಾನ್‌ ಹೇಳಿದೆ.

ಇಸ್ರೇಲ್‌ನಿಂದ ರಾಯಭಾರ ಸಿಬ್ಬಂದಿ ಹಾಗೂ ಅವರ ಕುಟುಂಬದವರನ್ನು ಅಜರ್‌ಬೈಜಾನ್‌ಗೆ ಸ್ಥಳಾಂತರಿಸಲಾಗಿದೆ ಎಂದಿರುವ ನ್ಯೂಜಿಲೆಂಡ್, ವಾಯು ಪ್ರದೇಶ ಮುಚ್ಚಿರುವುದರಿಂದ ನಾಗರಿಕರ ಸ್ಥಳಾಂತರಕ್ಕೆ ತೊಡಕಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ಇಸ್ರೇಲ್‌ನಿಂದ ಹೊರಡಲು ಬಯಸುವ ತನ್ನ ನಾಗರಿಕರಿಗೆ ವಿಮಾನ ಹಾಗೂ ಹಡಗು ವ್ಯವಸ್ಥೆ ಮಾಡುತ್ತಿರುವುದಾಗಿ ಅಮೆರಿಕ ಹೇಳಿದೆ.

ನೈಜೀರಿಯಾ, ನಾರ್ವೆ, ಪೋಲೆಂಡ್‌, ಪೋರ್ಚುಗಲ್‌, ಸರ್ಬಿಯಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಕೂಡ ತಮ್ಮ ನಾಗರಿಕರನ್ನು ಇರಾನ್‌ ಹಾಗೂ ಇಸ್ರೇಲ್‌ನಿಂದ ಸುರಕ್ಷಿತವಾಗಿ ಕರೆತರುವ ಕೆಲಸದಲ್ಲಿ ತೊಡಗಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.