ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ
ರಾಯಿಟರ್ಸ್ ಚಿತ್ರ
ಟೆಹರಾನ್: ‘ಕತಾರ್ ನಲ್ಲಿರುವ ಅಮೆರಿಕದ ನೆಲೆಯ ಮೇಲೆ ದಾಳಿ ನಡೆಸುವ ಮೂಲಕ ನಾವು ಅಮೆರಿಕಕ್ಕೆ ಕಪಾಳಮೋಕ್ಷ ಮಾಡಿದ್ದೇವೆ. ಇರಾನ್ ಮೇಲೆ ಮತ್ತೆ ದಾಳಿಗೆ ಮುಂದಾದರೆ ಅಮೆರಿಕ ದುಬಾರಿ ಬೆಲೆ ತೆರಬೇಕಾಗುತ್ತದೆ. ಭವಿಷ್ಯದಲ್ಲಿ ಇದು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸಿ’ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅಮೆರಿಕಕ್ಕೆ ತಾಕೀತು ಮಾಡಿದ್ದಾರೆ.
ಇಸ್ರೇಲ್ ಜತೆಗೆ ಕದನ ವಿರಾಮ ಘೋಷಣೆಯಾಗಿ ಎರಡು ದಿನಗಳ ಬಳಿಕ ಸಾರ್ವಜನಿಕ ಹೇಳಿಕೆ ನೀಡಿರುವ ಖಮೇನಿ, ಅಮೆರಿಕ ಮತ್ತು ಇಸ್ರೇಲ್‌ಗೆ ಕಟು ಶಬ್ದಗಳಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ‘ಇರಾನ್ ತಂಟೆಗೆ ಬಂದರೆ ಭಾರಿ ಬೆಲೆ ತೆರಬೇಕಾಗು ತ್ತದೆ’ ಎಂದು ಎಚ್ಚರಿಸಿದ್ದಾರೆ. ಖಮೇನಿ ಮಾತನಾಡುತ್ತಿರುವ 10 ನಿಮಿಷಗಳ ವಿಡಿಯೊ ತುಣುಕನ್ನು ಇರಾನ್ ರಾಷ್ಟ್ರೀಯ ಟಿವಿ ಪ್ರಸಾರ ಮಾಡಿದೆ.
ಜೂನ್ 22ರಂದು ಇರಾನ್‌ನ ಮೂರು ಪರಮಾಣು ಘಟಕಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಖಮೇನಿ, ‘ಈ ದಾಳಿಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಉತ್ಪ್ರೇಕ್ಷಿತ. ಅವರು ಮಹತ್ವದ್ದೇನನ್ನೂ ಸಾಧಿಸಿಲ್ಲ’ ಎಂದು ಹೇಳಿದ್ದಾರೆ.
‘ಕತಾರ್‌ನಲ್ಲಿನ ಅಮೆರಿಕದ ವಾಯು ನೆಲೆಯ ಮೇಲೆ ಇರಾನ್ ನಡೆಸಿರುವ ದಾಳಿಯು ಈ ಪ್ರದೇಶದಲ್ಲಿ ಅಮೆರಿಕದ ನೆಲೆಗಳನ್ನು ಪ್ರವೇಶಿಸುವ ಸಾಮರ್ಥ್ಯ ನಮ್ಮ ರಾಷ್ಟ್ರಕ್ಕೆ ಇದೆ ಮತ್ತು ಅಗತ್ಯ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂಬ ಸಂದೇಶವನ್ನು ರವಾನಿಸಿದೆ’ ಎಂದಿದ್ದಾರೆ.
‘ನಮ್ಮ ದಾಳಿಯಿಂದ ಇರಾನ್‌ನ ಪರಮಾಣು ಯೋಜನೆಯ ಪ್ರಗತಿಯನ್ನು ಹಲವು ದಶಕಗಳ ಹಿಂದಕ್ಕೆ ತಳ್ಳಿದ್ದೇವೆ. ಇರಾನ್‌ನ ಪರಮಾಣು ಘಟಕಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದೇವೆ’ ಎಂದು ಟ್ರಂಪ್ ಹೇಳಿದ್ದರು.
‘ಇರಾನ್–ಇಸ್ರೇಲ್ ಯುದ್ದದಲ್ಲಿ ತಾನು ಮಧ್ಯಪ್ರವೇಶ ಮಾಡದಿದ್ದರೆ ‘ಜಿಯೊನಿಸ್ಟ್ ಚಳವಳಿ’ ಸಂಪೂರ್ಣ ನಾಶವಾಗಲಿದೆ’ ಎಂದು ಅಮೆರಿಕ ಭಾವಿಸಿದೆ. ಈ ಕಾರಣಕ್ಕಾಗಿಯೇ ಅಮೆರಿಕ ಯುದ್ದದಲ್ಲಿ ಮಧ್ಯಪ್ರವೇಶಿಸಿದೆ. ಆದರೆ, ಇದರಿಂದ ಅವರು ಸಾಧಿಸಿದ್ದೇನೂ ಇಲ್ಲ’ ಎಂದು ಖಮೇನಿ ಹೇಳಿದ್ದಾರೆ.
‘ಇರಾನ್‌ನ ಪರಮಾಣು ಘಟಕಗಳ ಮೇಲೆ ಅಮೆರಿಕ ನಡೆಸಿರುವ ದಾಳಿಯಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ’ ಎಂದು ಪರಮಾಣು ಯೋಜನೆಗಳ ಮೇಲೆ ನಿಗಾ ವಹಿಸುವ ವಿಶ್ವಸಂಸ್ಥೆಯ ಇಂಟರ್‌ನ್ಯಾಷನಲ್ ಆಟೊಮಿಕ್ ಎನರ್ಜಿ ಏಜೆನ್ಸಿಯ ನಿವೃತ್ತ ನಿರ್ದೇಶಕ ರಫೇಲ್ ಗ್ರೊಸಿ ಹೇಳಿದ್ದಾರೆ.
ಇರಾನ್‌ನ ಪರಮಾಣು ಘಟಕ, ಸೇನಾಧಿಕಾರಿಗಳು, ವಿಜ್ಞಾನಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಜೂನ್ 13ರಂದು ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಖಮೇನಿ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದರು. ಜೂನ್ 19ರಂದು ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
ಶಾಂತಿ ಸ್ಥಾಪನೆ ಯತ್ನ:
ಇರಾನ್ ಮತ್ತು ಅಮೆರಿಕದ ಅಧಿಕಾರಿಗಳು ಶೀಘ್ರದಲ್ಲೇ ಮಾತುಕತೆ ನಡೆಸಲಿದ್ದು, ಇರಾನ್‌ನಲ್ಲಿ ದೀರ್ಘಕಾಲಿಕ ಶಾಂತಿ ಸ್ಥಾಪನೆಗೆ ಪ್ರಯತ್ನಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಆದರೆ, ಇಂತಹ ಯಾವುದೇ ಮಾತುಕತೆಯನ್ನು ಇರಾನ್ ಒಪ್ಪಿಕೊಂಡಿಲ್ಲ. ಇರಾನ್ ಮತ್ತು ಅಮೆರಿಕ ನಿಯೋಗದ ನಡುವಿನ ಮಾತುಕತೆ ಜೂನ್ ಆರಂಭದಲ್ಲಿ ಒಮಾನ್‌ನಲ್ಲಿ ನಿಗದಿಯಾಗಿತ್ತು. ಆದರೆ, ಜೂನ್ 13ರಂದು ಇಸ್ರೇಲ್, ಇರಾನ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಈ ಮಾತುಕತೆಯನ್ನು ಮುಂದೂಡಲಾಗಿತ್ತು.
ಸಹಜ ಸ್ಥಿತಿಗೆ ಜನಜೀವನ
ಇಸ್ರೇಲ್ ಜತೆಗೆ ಕದನ ವಿರಾಮದ ಘೋಷಣೆಯಾದ ನಂತರ ಇರಾನ್‌ನಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ರಾಜಧಾನಿ ಟೆಹರಾನ್‌ನಲ್ಲಿ ಗುರುವಾರ ವಿಮಾನ ನಿಲ್ದಾಣವನ್ನು ಭಾಗಶಃ ತೆರೆಯಲಾಗಿತ್ತು. ಅಂಗಡಿ–ಮುಂಗಟ್ಟುಗಳು ತೆರೆದಿದ್ದವು. ವಾಹನ ಸಂಚಾರ ಪುನರಾರಂಭಗೊಂಡಿದೆ.
‘ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನರಾರಂಭ ಗೊಂಡಿದೆ. ದೇಶೀಯ ಮತ್ತು ಅಂತರ ರಾಷ್ಟ್ರೀಯ ವಿಮಾನಗಳ ಹಾರಾಟ ನಿಧಾನವಾಗಿ ಆರಂಭಗೊಂಡಿದೆ’ ಎಂದು ಇರಾನ್‌ನ ರಸ್ತೆ ಮತ್ತು ನಗರಾಭಿವೃದ್ಧಿ ಸಚಿವ ಮಸ್ಜಿದ್ ಅಖ್ವಾನ್ ಹೇಳಿದ್ದಾರೆ.
ಅಪಾರ ಸಾವು–ನೋವು
ಇಸ್ರೇಲ್ ಜತೆಗಿನ ಸಂಘರ್ಷದಿಂದಾಗಿ ಕಳೆದ ಒಂದು ವಾರದಲ್ಲಿ 606 ಜನರು ಮೃತಪಟ್ಟಿದ್ದು, 5,332 ಮಂದಿ ಗಾಯಗೊಂಡಿದ್ದಾರೆ ಎಂದು ಟೆಹರಾನ್ ಹೇಳಿದೆ. ವಾಷಿಂಗ್ಟನ್ ಮೂಲದ ಮಾನವ ಹಕ್ಕುಗಳ ಸಂಘಟನೆ ಬಿಡುಗಡೆ ಮಾಡಿರುವ ಅಂಕಿ ಅಂಶದಂತೆ, ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ 1,054 ಮಂದಿ ಮೃತಪಟ್ಟಿದ್ದು, 4,476 ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟವರಲ್ಲಿ 417 ಮಂದಿ ಸಾರ್ವಜನಿಕರು ಮತ್ತು 318 ಜನರು ಸೇನಾ ಸಿಬ್ಬಂದಿ ಸೇರಿದ್ದಾರೆ.
ಇರಾನ್‌ನ ಪ್ರತಿದಾಳಿಯಲ್ಲಿ ಇಸ್ರೇಲ್‌ನಲ್ಲಿ 28 ಜನರು ಮೃತಪಟ್ಟಿದ್ದು, 1 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.