ADVERTISEMENT

ಇರಾನ್–ಇಸ್ರೇಲ್ ಸಂಘರ್ಷ ಉಲ್ಬಣ: ಸಂಭವನೀಯ ದಾಳಿ ಎದುರಿಸಲು ಬಹರೇನ್, ಕುವೈತ್ ಸಜ್ಜು

ರಾಯಿಟರ್ಸ್
Published 22 ಜೂನ್ 2025, 12:55 IST
Last Updated 22 ಜೂನ್ 2025, 12:55 IST
<div class="paragraphs"><p>ಇಸ್ರೇಲ್ ಮೇಲೆ ಇರಾನ್  ಕ್ಷಿಪಣಿ ದಾಳಿ ನಡೆಸಿರುವ ದೃಶ್ಯ</p></div>

ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿರುವ ದೃಶ್ಯ

   

ರಾಯಿಟರ್ಸ್ ಚಿತ್ರ

ದುಬೈ: ಅಮೆರಿಕ ಮಧ್ಯಪ್ರವೇಶದಿಂದಾಗಿ ತೀವ್ರಗೊಂಡಿರುವ ಇಸ್ರೇಲ್‌ – ಇರಾನ್‌ ಸಂಘರ್ಷವು, ತಮ್ಮ ಪ್ರದೇಶಗಳಿಗೂ ವ್ಯಾಪಿಸುವ ಸಾಧ್ಯತೆ ಇದೆ ಎಂದು ಎಚ್ಚೆತ್ತುಕೊಂಡಿರುವ ಬಹರೇನ್‌ ಹಾಗೂ ಕುವೈತ್‌, ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿವೆ.

ADVERTISEMENT

ಇರಾನ್‌ನ ಮೂರು ಪ್ರಮುಖ ಪರಮಾಣು ಕೇಂದ್ರಗಳಾದ ಫೋರ್ಡೊ, ನತಾಂಜ್‌ ಮತ್ತು ಎಸ್ಫಹಾನ್ ಮೇಲೆ ಅಮೆರಿಕದ ಶನಿವಾರ ತಡರಾತ್ರಿ ದಾಳಿ ಮಾಡಿದೆ. ಈ ಕುರಿತು ಇಂದು (ಭಾನುವಾರ, ಜೂನ್‌ 22) ಮಾಹಿತಿ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಶಾಂತಿ ಮಾತುಕತೆಗೆ ಒಪ್ಪದಿದ್ದರೆ ಇನ್ನಷ್ಟು ವಿಧ್ವಂಸಕ ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಅಮೆರಿಕ ದಾಳಿ ನಡೆಸಿದರೆ, ಸೇನಾ ನೆಲೆಗಳೂ ಸೇರಿದಂತೆ ಆ ದೇಶಕ್ಕೆ ಸಂಬಂಧಿಸಿದ ಸ್ಥಳಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸುತ್ತೇವೆ ಎಂದು ಇರಾನ್‌ ಈ ಮೊದಲೇ ಎಚ್ಚರಿಕೆ ನೀಡಿತ್ತು.

ಅಮೆರಿಕ ನೌಕಾಪಡೆಯ 5ನೇ ತುಕಡಿಯ ಪ್ರಧಾನ ಕಚೇರಿ ಬಹರೇನ್‌ನಲ್ಲಿದೆ. ಹಾಗೆಯೇ, ಅಮೆರಿಕ ಸೇನೆಯ ಹಲವು ನೆಲೆಗಳು ಕುವೈತ್‌ನಲ್ಲಿವೆ. ಹಾಗಾಗಿ, ಈ ಎರಡೂ ದೇಶಗಳಲ್ಲಿ ಆತಂಕ ಸೃಷ್ಟಿಯಾಗಿದೆ.

'ಪ್ರಾದೇಶಿಕ ಭದ್ರತಾ ಪರಿಸ್ಥಿತಿಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿರಿಸಿ, ಅತ್ಯಗತ್ಯ ಸಂದರ್ಭಗಳಲ್ಲಿ ಮಾತ್ರವೇ ಮುಖ್ಯ ರಸ್ತೆಗಳನ್ನು ಬಳಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಮುಖ್ಯರಸ್ತೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅವಕಾಶ ನೀಡಬೇಕು ಮತ್ತು ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ನಾಗರಿಕರಲ್ಲಿ ಮನವಿ ಮಾಡುತ್ತೇವೆ' ಎಂಬುದಾಗಿ ಬಹರೇನ್‌ ಆಂತರಿಕ ಸಚಿವಾಲಯವು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ, ಮುಂದಿನ ಸೂಚನೆ ನೀಡುವವರೆಗೆ ಶೇ 70ರಷ್ಟು ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡಬೇಕು ಎಂದೂ ಸೂಚಿಸಲಾಗಿದೆ ಎಂದು ತಿಳಿಸಿದೆ.

ತುರ್ತು ಸಂದರ್ಭಕ್ಕೆ ಸಜ್ಜಾಗಲು ರಾಷ್ಟ್ರೀಯ ಯೋಜನೆ ಹಾಗೂ ರಾಷ್ಟ್ರೀಯ ನಾಗರಿಕ ತುರ್ತು ಕೇಂದ್ರ ತೆರೆಯಲಾಗಿದೆ. ದೇಶದಾದ್ಯಂತ ಎಚ್ಚರಿಕೆ ಸೈರನ್‌ಗಳ ಪರೀಕ್ಷೆ ಆರಂಭಿಸಲಾಗಿದೆ ಎಂಬುದಾಗಿ ಬಹರೇನ್‌ ಅಧಿಕಾರಿಗಳು ಕಳೆದವಾರವೇ ಹೇಳಿದ್ದರು.

ದೇಶದ ಸಚಿವಾಲಯಗಳ ಸಂಕೀರ್ಣಗಳಲ್ಲಿ ಆಶ್ರಯ ಕೇಂದ್ರಗಳನ್ನು ತೆರೆದಿರುವುದಾಗಿ ಕುವೈತ್‌ ಹಣಕಾಸು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.