ADVERTISEMENT

ಇಸ್ರೇಲ್‌ ದಾಳಿ: 41 ಪ್ಯಾಲೆಸ್ಟೀನಿಯನ್ನರ ಸಾವು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 15:31 IST
Last Updated 19 ಡಿಸೆಂಬರ್ 2023, 15:31 IST
ಗಾಜಾಪಟ್ಟಿಯ ಮೇಲೆ ಮಂಗಳವಾರ ಇಸ್ರೇಲ್‌ ನಡೆಸಿದ ಬಾಂಬ್‌ ದಾಳಿಗೆ ದೂಳು ಆವರಿಸಿತ್ತು –ಎಪಿ/ಪಿಟಿಐ ಚಿತ್ರ
ಗಾಜಾಪಟ್ಟಿಯ ಮೇಲೆ ಮಂಗಳವಾರ ಇಸ್ರೇಲ್‌ ನಡೆಸಿದ ಬಾಂಬ್‌ ದಾಳಿಗೆ ದೂಳು ಆವರಿಸಿತ್ತು –ಎಪಿ/ಪಿಟಿಐ ಚಿತ್ರ   

ರಫಾ (ಗಾಜಾ ಪಟ್ಟಿ)/ಕೈರೊ: ಹಮಾಸ್‌ ಬಂಡುಕೋರರ ನಿಯಂತ್ರಣದಲ್ಲಿರುವ ಗಾಜಾದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಇಸ್ರೇಲ್‌ ತೀವ್ರ ದಾಳಿ ನಡೆಸಿದ್ದು, 41 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ.

ಉತ್ತರ ಗಾಜಾದ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಕನಿಷ್ಠ 13 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದು, 75 ಮಂದಿ ಗಾಯಗೊಂಡಿದ್ದಾರೆ ಎಂದು ಹಮಾಸ್ ನಿಯಂತ್ರಿತ ಪ್ರದೇಶದಲ್ಲಿನ ಆರೋಗ್ಯ ಸಚಿವಾಲಯದ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.

ದಕ್ಷಿಣ ಗಾಜಾದಲ್ಲಿ ಮಂಗಳವಾರ ನಡೆಸಿದ ದಾಳಿಯಲ್ಲಿ 28 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ. ಕದನ ವಿರಾಮ ಘೋಷಿಸುವಂತೆ ಅಂತರರಾಷ್ಟ್ರೀಯ ಸಮುದಾಯ, ವಿಶ್ವಸಂಸ್ಥೆ ಒತ್ತಡ ಹಾಕುತ್ತಿದ್ದರೂ, ಇದಕ್ಕೆ ಸೊಪ್ಪು ಹಾಕದೆ ಇಸ್ರೇಲ್‌ ಗಾಜಾದಲ್ಲಿ ತನ್ನ ದಾಳಿಯನ್ನು ತೀವ್ರಗೊಳಿಸಿದೆ. 

ADVERTISEMENT

ಉತ್ತರ ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಆಸ್ಪತ್ರೆಯ ಮೇಲೂ ಇಸ್ರೇಲ್‌ ಸೇನೆ ದಾಳಿ ನಡೆಸಿದೆ. ಇಲ್ಲಿನ ಪ್ರಮುಖ ನಗರಗಳು ಬಹುತೇಕ ನಾಶವಾಗಿವೆ.

ಗಾಜಾದಲ್ಲಿರುವ ಎಂಟು ನಿರಾಶ್ರಿತರ ಶಿಬಿರಗಳಲ್ಲಿ ಜಬಾಲಿಯಾ ಶಿಬಿರವೇ ದೊಡ್ಡದು. 1.4 ಚದರ ಕಿ.ಮೀ ವಿಸ್ತೀರ್ಣದಲ್ಲಿರುವ ಈ ಶಿಬಿರವು 1.16 ಲಕ್ಷ ನೋಂದಾಯಿತ ನಿರಾಶ್ರಿತರಿಗೆ ನೆಲೆ ಒದಗಿಸಿದೆ. ಇಲ್ಲಿರುವ ಹಲವರು ಆಹಾರ, ಔಷಧ ಸೇರಿದಂತೆ ಇನ್ನಿತರೆ ಅವಶ್ಯಕ ವಸ್ತುಗಳಿಗಾಗಿ ಪ್ಯಾಲೆಸ್ಟೀನಿಯನ್‌ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆಯು (ಯುಎನ್ಆರ್‌ಡಬ್ಲ್ಯುಎ) ನೀಡುವ ಸಹಾಯವನ್ನೇ ಅವಲಂಬಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.