ಗಾಜಾ ನಗರದ ದಕ್ಷಿಣಕ್ಕೆ ಇರುವ ಅಲ್–ಜಹ್ರಾ ನಗರದಲ್ಲಿ ಇಸ್ರೇಲ್ ವಾಯುದಾಳಿಯಿಂದಾಗಿ ಧ್ವಂಸಗೊಂಡಿರುವ ಕಟ್ಟಡಗಳ ವೈಮಾನಿಕ ನೋಟ
ಗಾಜಾ/ಜೆರುಸಲೇಂ: ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಬುಧವಾರ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕು ಎಂಬ ಜಾಗತಿಕ ಮನವಿಗಳ ನಡುವೆಯೇ, ಗಾಜಾ ನಗರದ ಮೇಲಿನ ತನ್ನ ಹಿಡಿತವನ್ನು ಇಸ್ರೇಲ್ ಮತ್ತಷ್ಟು ಬಿಗಿಗೊಳಿಸುತ್ತಿದೆ.
ಗಾಜಾದಲ್ಲಿರುವ ಹಮಾಸ್ ಬಂಡಕೋರರು ಅಡಗಿರುವ ತಾಣಗಳನ್ನು ಗುರಿಯಾಗಿಸಿ ಇಸ್ರೇಲ್ ಸೇನಾ ಪಡೆಗಳು (ಐಡಿಎಫ್) ದಾಳಿಯನ್ನು ತೀವ್ರಗೊಳಿಸಿವೆ. ಭೂದಾಳಿ ಜೊತೆಗೆ, ವಾಯು ದಾಳಿಯನ್ನು ಮುಂದುವರಿಸಿವೆ. ಎರಡು ಪ್ರತ್ಯೇಕ ದಾಳಿಗಳಲ್ಲಿ ಹಮಾಸ್‌ನ ಪ್ರಮುಖ ಶಸ್ತ್ರಾಸ್ತ್ರ ತಯಾರಕ ಮಹಸೀನ್ ಅಬು ಜಿನಾ ಹಾಗೂ ಕೆಲ ಬಂಡುಕೋರರನ್ನು ಹತ್ಯೆ ಮಾಡಿದ್ದಾಗಿ ಇಸ್ರೇಲ್ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
ಇಸ್ರೇಲ್ ಸೇನಾಪಡೆಗಳಿಗೆ ಪ್ರತಿರೋಧ ಒಡ್ಡಿದ್ದಾಗಿ ಹೇಳಿಕೊಂಡಿರುವ ಹಮಾಸ್, ತಾನು ನಡೆಸಿದ ದಾಳಿಯಿಂದಾಗಿ ಅಪಾರ ಹಾನಿಯಾಗಿದೆ ಎಂದು ಹೇಳಿದೆ. ಕೇಂದ್ರ ಗಾಜಾದಲ್ಲಿರುವ ನಸೀರತ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ನಿರಾಶ್ರಿತರ ಶಿಬಿರಯೊಂದರ ಬಳಿ ಬಂಡುಕೋರರು ಹಾಗೂ ಇಸ್ರೇಲಿ ಪಡೆಗಳ ನಡುವೆ ನಡೆದ ಸಂಘರ್ಷ ನಡೆದಿದ್ದು, ಇಸ್ರೇಲ್‌ಗೆ ಟ್ಯಾಂಕ್‌ವೊಂದನ್ನು ನಾಶಪಡಿಸಲಾಗಿದೆ ಎಂದು ಪ್ಯಾಲೆಸ್ಟೀನ್ ಮಾಧ್ಯಮ ವರದಿ ಮಾಡಿದೆ.
ಗಾಜಾ ನಗರವನ್ನು ಸುತ್ತುವರಿದಿರುವ ಐಡಿಎಫ್, ಸುರಂಗ ಮಾರ್ಗಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಅಧಿಕ ಜನವಸತಿವುಳ್ಳ ಗಾಜಾ ನಗರದ ಹೃದಯ ಭಾಗದತ್ತ ತನ್ನ ಯೋಧರು ಸಾಗಿದ್ದಾರೆ ಎಂದು ಐಡಿಎಫ್ ತಿಳಿಸಿದೆ.
ಈ ಸಂಘರ್ಷದಲ್ಲಿ ಈ ವರೆಗೆ 4,324 ಮಕ್ಕಳು ಸೇರಿ ಕನಿಷ್ಠ 10,569 ಮಂದಿ ಮೃತಪಟ್ಟಿದ್ದಾರೆ. 26,457 ಜನರು ಗಾಯಗೊಂಡಿದ್ದಾರೆ ಎಂದು ಹಮಾಸ್ ನಿಯಂತ್ರಿತ ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಮುಖ ಬೆಳವಣಿಗೆಗಳು
* ಗಾಜಾ ನಗರದ ಅಡಿಯಲ್ಲಿ ನೂರಾರು ಕಿ.ಮೀ. ಉದ್ದದ ಸುರಂಗಗಳನ್ನು ನಿರ್ಮಿಸಲಾಗಿದೆ. ಸ್ಫೋಟಕಗಳನ್ನು ಬಳಸಿ ಇವುಗಳನ್ನು ಧ್ವಂಸಗೊಳಿಸಲಾಗುತ್ತಿದೆ ಎಂದು ಇಸ್ರೇಲ್ ಸೇನೆಯ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ
* ಗಾಜಾದ ಉತ್ತರ ಭಾಗವನ್ನು ತೊರೆಯುತ್ತಿರುವ ಸಾವಿರಾರು ಜನರು ಇಸ್ರೇಲ್‌ನ ಟ್ಯಾಂಕ್‌ಗಳ ಸರ್ಪಗಾವಲಿರುವ ರಸ್ತೆ ಮೂಲಕ ದಕ್ಷಿಣದತ್ತ ಸಾಗುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ
* ಗಾಜಾದ ಪ್ರಮುಖ ಅಲ್ ಶಿಫಾ ಆಸ್ಪತ್ರೆ ಸೇರಿದಂತೆ ಇಸ್ರೇಲ್ ಪಡೆಗಳು ಸುತ್ತುವರಿದಿರುವ ಪ್ರದೇಶಗಳಲ್ಲಿ ಈಗಲೂ ಸಾವಿರಾರು ಜನರು ಆಶ್ರಯ ಪಡೆದಿದ್ದಾರೆ
* ಇಸ್ರೇಲ್ ಪಡೆಗಳ ದಾಳಿ ಪರಿಣಾಮವಾಗಿ ನೂರಾರು ಕಟ್ಟಡಗಳು ನೆಲಸಮಗೊಂಡಿದ್ದು, ಅಗತ್ಯ ವಸ್ತುಗಳ ಪೂರೈಕೆಯೂ ವ್ಯತ್ಯಯಗೊಂಡಿದೆ. ಸಂತ್ರಸ್ತರ ನೆರವಿಗಾಗಿ ಕದನ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆ ಹಾಗೂ ಜಿ7 ರಾಷ್ಟ್ರಗಳು ಮನವಿ ಮಾಡಿವೆ.
* ಶಾಂತಿ ಸ್ಥಾಪನೆ ಪ್ರಕ್ರಿಯೆ ಆರಂಭಿಸುವಂತೆ ಟೊಕಿಯೊದಲ್ಲಿ ಸಭೆ ಸೇರಿರುವ ಜಿ7 ರಾಷ್ಟ್ರಗಳ ವಿದೇಶಾಂಗ ಸಚಿವರು ಮನವಿ ಮಾಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.