ADVERTISEMENT

ಮದ್ಯದ ಬಾಟಲಿ ಮೇಲೆ ಗಾಂಧಿ ಚಿತ್ರ: ಕ್ಷಮೆಯಾಚಿಸಿದ ಇಸ್ರೇಲ್‌ ಕಂಪನಿ

ಪಿಟಿಐ
Published 3 ಜುಲೈ 2019, 15:31 IST
Last Updated 3 ಜುಲೈ 2019, 15:31 IST
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ   

ಜೆರುಸಲೇಂ: ಇಸ್ರೇಲ್‌ನ 71ನೇ ಸ್ವಾತಂತ್ರ್ಯ ದಿನಾಚರಣೆ ನೆನಪಿಗಾಗಿ ಮಹಾತ್ಮ ಗಾಂಧಿ ಅವರ ಚಿತ್ರವನ್ನು ಮದ್ಯದ ಬಾಟಲಿ ಮೇಲೆ ಹಾಕುವ ಮೂಲಕ ವಿವಾದ ಸೃಷ್ಟಿಸಿದ್ದ ಅಲ್ಲಿನ ಕಂಪನಿಯೊಂದು ಬುಧವಾರ ಭಾರತೀಯರ ಮತ್ತು ಭಾರತ ಸರ್ಕಾರದ ಕ್ಷಮೆಯಾಚಿಸಿದೆ.

‘ಮಹಾತ್ಮ ಗಾಂಧಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರ ಭಾವಚಿತ್ರವನ್ನು ಮದ್ಯದ ಬಾಟಲಿ ಮೇಲೆ ಬಳಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಭಾರತೀಯರ ಭಾವನೆಗಳನ್ನು ನೋಯಿಸಿದ್ದಕ್ಕೆ ಅಲ್ಲಿನ ಜನರ ಮತ್ತು ಸರ್ಕಾರದ ಕ್ಷಮೆಯಾಚಿಸುತ್ತೇವೆ’ ಎಂದು ಮಾಲ್ಕಾ ಬಿಯರ್‌ ಕಂಪನಿಯ ಬ್ರ್ಯಾಂಡ್‌ ವ್ಯವಸ್ಥಾಪಕ ಗಿಲಾಡ್‌ ಡ್ರೊರ್‌ ಹೇಳಿದ್ದಾರೆ.

ರಾಷ್ಟ್ರಪಿತನ ಭಾವಚಿತ್ರವನ್ನು ಮದ್ಯದ ಬಾಟಲಿ ಮೇಲೆ ಹಾಕಿದ್ದಕ್ಕೆಭಾರತದ ರಾಜ್ಯಸಭೆ ಕಲಾಪ ಸಂದರ್ಭದಲ್ಲಿ ಸದಸ್ಯರು ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ ಸೂಕ್ತ ಕ್ರಮ ತೆಗೆದುಕೊಳ್ಳಲು ವಿದೇಶಾಂಗ ಖಾತೆ ಸಚಿವ ಎಸ್‌.ಜೈಶಂಕರ್‌ ಅವರಿಗೆ ನಿರ್ದೇಶನ ನೀಡಬೇಕು ಎಂದು ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರನ್ನು ಮಂಗಳವಾರ ಒತ್ತಾಯಿಸಿದ್ದರು.

ADVERTISEMENT

‘ಈ ಮದ್ಯದ ಬಾಟಲಿಗಳ ತಯಾರಿಕೆ ಮತ್ತು ಪೂರೈಕೆಯನ್ನು ಸ್ಥಗಿತಗಿಳಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಗಾಂಧಿಯವರ ಭಾವಚಿತ್ರವಿರುವ ಮದ್ಯದ ಬಾಟಲಿಗಳನ್ನು ಮರಳಿ ಪಡೆಯಲು ಪ್ರಯತ್ನ ನಡೆದಿದೆ’ ಎಂದು ಡ್ರೊರ್‌ ಅವರು ಇಸ್ರೇಲ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ತಿಳಿಸಿದ್ದಾರೆ. ಮುಂದೆಯೂ ಇಂಥ ಕೆಲಸ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.