
ಹಫೀಜ್ ಅಬ್ದುರ್ ರೌಫ್
(ಚಿತ್ರ ಕೃಪೆ– ಯುಟ್ಯೂಬ್)
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿತ್ತು ಎಂದು ಲಷ್ಕರ್–ಎ–ತಯಬಾ (ಎಲ್‌ಇಟಿ) ಉನ್ನತ ಕಮಾಂಡರ್ ಹಫೀಜ್ ಅಬ್ದುರ್ ರೌಫ್ ಒಪ್ಪಿಕೊಂಡಿದ್ದಾರೆ.
ಇತ್ತೀಚೆಗೆ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ರೌಫ್, ಆಪರೇಷನ್ ಸಿಂಧೂರ ಪ್ರಮುಖ ದಾಳಿ ಎಂದು ಕರೆದಿದ್ದಾರೆ. ಆ ದಾಳಿ ಪಾಕಿಸ್ತಾನ ಸರ್ಕಾರವನ್ನು ದಿಗ್ಭ್ರಮೆಗೊಳಿಸಿತ್ತು. ಆದರೆ 'ಅಲ್ಲಾ‘ ಅವರನ್ನು(ಪಾಕ್ ಜನರನ್ನು) ರಕ್ಷಿಸಿದರು ಎಂದು ಹೇಳಿದ್ದಾರೆ.
ರೌಫ್ ಮಾತನಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
2025ರ ಮೇ 6 ಮತ್ತು 7 ರಂದು ಮುರಿಡ್ಕೆಯಲ್ಲಿ ಏನಾಯಿತು ಎಂಬುವುದು ನಿಮಗೆ ತಿಳಿದಿದೆ. ಮಸೀದಿಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಅದು ಒಂದು ಬೃಹತ್ ದಾಳಿಯಾಗಿತ್ತು, ಆದರೆ ಅಲ್ಲಾ ನಮ್ಮನ್ನು ರಕ್ಷಿಸಿದರು. ಅಲ್ಲಿ ಮಕ್ಕಳು ಇರಲಿಲ್ಲ. ಪರಿಸ್ಥಿತಿಯ ಅರಿವಿದ್ದ ಕಾರಣ ಅವರನ್ನು ದೂರ ತೆರಳುವಂತೆ ಸಲಹೆ ನೀಡಲಾಗಿತ್ತು ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಕಾಣಬಹುದು.
ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ, ಆದರೆ ವಾಸ್ತವದಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡಲಾಗಿದೆ. ಯುದ್ಧದ ನಿಯಮಗಳು ಬದಲಾಗಿವೆ ಎಂದೂ ಅವರು ಹೇಳಿದ್ದಾರೆ.
2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವಿಗೀಡಾಗಿದ್ದರು. ಇದಕ್ಕೆ ಪ್ರತಿಯಾಗಿ, ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 9 ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ದಾಳಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.