ADVERTISEMENT

ಚೀನಾದ ಸವಾಲುಗಳನ್ನು ಹಿಮ್ಮೆಟ್ಟಿಸುವ ಕಾಲ ಬಂದಿದೆ: ಮೈಕ್‌ ಪಾಂಪಿಯೊ

ಪಿಟಿಐ
Published 17 ಜುಲೈ 2020, 7:03 IST
Last Updated 17 ಜುಲೈ 2020, 7:03 IST
ಮೈಕ್‌ ಪಾಂಪಿಯೊ
ಮೈಕ್‌ ಪಾಂಪಿಯೊ   

ವಾಷಿಂಗ್ಟನ್‌: ‘ಚೀನಾದ ಕಮ್ಯುನಿಸ್ಟ್‌ ಪಕ್ಷವು ಜಗತ್ತಿಗೆ ಒಡ್ಡಿರುವ ಸವಾಲುಗಳನ್ನು ಎದುರಿಸಿ, ಅವುಗಳನ್ನು ಹೆಮ್ಮೆಟ್ಟಿಸಬೇಕಾದ ಕಾಲ ಬಂದಿದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಹೇಳಿದ್ದಾರೆ.

ಫಾಕ್ಸ್‌ ನ್ಯೂಸ್‌ ಟಿ.ವಿ. ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಈಚಿನ ವರ್ಷಗಳಲ್ಲಿ ಚೀನಾದ ನಡೆಗಳನ್ನು ಟೀಕಿಸಿದ ಅವರು, ‘ಕೊರೊನಾ ವೈರಸ್‌ ಕುರಿತ ಮಾಹಿತಿಯನ್ನು ಅವರು ಜಗತ್ತಿಗೆ ತಿಳಿಸುವುದಕ್ಕಿಂತ ಸಾಕಷ್ಟು ಮೊದಲೇ, ಈ ವೈರಸ್‌ ಮನುಷ್ಯನಿಂದ ಮನುಷ್ಯನಿಗೆ ಪಸರಿಸುತ್ತದೆ ಎಂಬುದು ಅವರಿಗೆ ತಿಳಿದಿತ್ತು. ದಕ್ಷಿಣ ಏಷ್ಯಾ ಮಾತ್ರವಲ್ಲ, ಏಷ್ಯಾದ ಇತರ ಭಾಗಗಳು ಮತ್ತು ಯುರೋಪ್‌ನ ರಾಷ್ಟ್ರಗಳು ಈ ಸೋಂಕಿನ ಅಪಾಯಗಳನ್ನು ಅರಿತಿದ್ದವು. ಆದರೆ ಈ ವಿಚಾರದಲ್ಲಿ ಅಮೆರಿಕ ಸ್ವಲ್ಪ ದೀರ್ಘ ಕಾಲದವರೆಗೆ ನಿದ್ರೆಯಲ್ಲಿತ್ತು ಎಂದರು.

‘ಚೀನಾದ ಸವಾಲುಗಳನ್ನು ಹಿಮ್ಮೆಟ್ಟಿಸುವ ಕಾಲ ಬಂದಿದೆ ಎಂಬುದನ್ನು ಈಗ ಎಲ್ಲಾ ರಾಷ್ಟ್ರಗಳು ಅರಿತುಕೊಂಡಿವೆ. ಕಳೆದ 40 ವರ್ಷಗಳಲ್ಲಿ ಅಮೆರಿಕವು ಚೀನಾವನ್ನು ಬೇರೆ ದೃಷ್ಟಿಯಿಂದ ನೋಡುವ ಮೂಲಕ ನಮ್ಮನ್ನು ತುಳಿಯಲು ಅವರಿಗೆ ಅವಕಾಶ ಮಾಡಿಕೊಟ್ಟಿದೆ. ‘ಇನ್ನು ಸಹಿಸಲಾಗದು’ ಎಂದು ಟ್ರಂಪ್‌ ಹೇಳಿದ್ದಾರೆ. ಅಮೆರಿಕವು ಇನ್ನು ಚೀನಾದ ಜತೆಗೆ ಸರಿಸಮಾನವಾದ ವ್ಯಾಪಾರ ಸಂಬಂಧ ಇಟ್ಟುಕೊಳ್ಳಲಿದೆ. ಅಮೆರಿಕದಲ್ಲಿ ಚೀನೀಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆಯೋ ಅದೇ ರೀತಿ ಅಮೆರಿಕನ್ನರನ್ನು ಚೀನಾದಲ್ಲಿ ನಡೆಸಿಕೊಳ್ಳಬೇಕು ಎಂದು ಅಮೆರಿಕ ಒತ್ತಾಯಿಸಲಿದೆ ಎಂದರು.

ADVERTISEMENT

‘ಕೊರೊನಾ ವೈರಸ್‌ ಮಾನವನ ಮೂಲಕ ಪಸರಿಸುತ್ತದೆ ಎಂಬ ವಿಚಾರವು, ಅದನ್ನು ಜಗತ್ತಿಗೆ ತಿಳಿಸುವುದಕ್ಕೂ ಮೂರು ವಾರಗಳ ಮೊದಲೇ ಚೀನೀಯರಿಗೆ ತಿಳಿದಿತ್ತು’ ಎಂದು ಇತ್ತೀಚೆಗೆ ಅಮೆರಿಕಕ್ಕೆ ಪರಾರಿಯಾಗಿರುವ ಹಾಂಗ್‌ಹಾಂಗ್‌ ಮೂಲದ ಸೋಂಕುರೋಗ ತಜ್ಞ ಡಾ. ಯೆನ್‌ ಲಿ–ಮೆಂಗ್‌ ಹೇಳಿದ್ದರು. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ‘ಈ ವಿಚಾರವನ್ನು ಜಗತ್ತಿನಿಂದ ಮುಚ್ಚಿಡಲು ವಿಶ್ವ ಆರೋಗ್ಯ ಸಂಸ್ಥೆಯೂ ಚೀನಾದ ಜತೆ ಕೈಜೋಡಿಸಿತ್ತು’ ಎಂದು ಆರೋಪಿಸಿದರು.

ವಿರೋಧಾಭಾಸದ ನಡೆ: ‘ಗಡಿಯಲ್ಲಿ ಶಾಂತಿ ಕಾಪಾಡುವವಿಚಾರವಾಗಿ ಭಾರತದ ಜತೆಗೆ ಒಪ್ಪಂದ ಮಾಡಿಕೊಂಡಿರುವ ಚೀನಾ, ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ. ಗಡಿಯಲ್ಲಿ ಭಾರತದ ಸೈನಿಕರ ಜತೆ ಸಂಘರ್ಷಕ್ಕೆ ಇಳಿಯುತ್ತಿದೆ. ವಾಸ್ತವ ಗಡಿರೇಖೆಯಿಂದ ಚೀನಾ ತನ್ನ ಸೈನಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ನಾವು ನಿರೀಕ್ಷಿಸುತ್ತೇವೆ’ ಎಂದು ಅಮೆರಿಕದ ಸಂಸದೀಯ ಸಮಿತಿಯೊಂದು ಹೇಳಿದೆ.

‘ಭಾರತೀಯರು ಮತ್ತು ಭಾರತ ಮೂಲದ ಅಮೆರಿಕನ್ನರನ್ನು ಕುರಿತ ಸಮಿತಿಯ ಸದಸ್ಯರಾಗಿರುವ ನಮಗೆ ಭಾರತ –ಚೀನಾ ಗಡಿಯಲ್ಲಿ ನಡೆದಿರುವ ಸಂಘರ್ಷವು ತುಂಬಾ ಬೇಸರ ಮೂಡಿಸಿದೆ’ ಎಂದು ಸಮಿತಿಯ ಸದಸ್ಯರಾದ ಜಾರ್ಜ್‌ ಹೋಲ್ಡಿಂಗ್‌ ಹಾಗೂ ಬ್ರಾಡ್‌ ಶೇರ್ಮನ್‌ ಗುರುವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.