ADVERTISEMENT

ಅಮೆರಿಕ ಚುನಾವಣೆ ಅಕ್ರಮದ ಕುರಿತ ಟ್ರಂಪ್‌ ಆರೋಪಗಳನ್ನು ನಂಬಲಾರೆ: ಪುತ್ರಿ ಇವಾಂಕಾ

ರಾಯಿಟರ್ಸ್
Published 10 ಜೂನ್ 2022, 5:28 IST
Last Updated 10 ಜೂನ್ 2022, 5:28 IST
ಇವಾಂಕಾ ಟ್ರಂಪ್‌ ವಿಚಾರಣೆ
ಇವಾಂಕಾ ಟ್ರಂಪ್‌ ವಿಚಾರಣೆ    

ವಾಷಿಂಗ್ಟನ್‌:2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯು ವ್ಯಾಪಕ ಮತದಾನ ಅಕ್ರಮದಿಂದ ಕೂಡಿದೆ ಎಂಬ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಾದವನ್ನು ನಾನು ನಂಬಲಾರೆ ಎಂದು ಸ್ವತಃ ಅವರ ಪುತ್ರಿ ಇವಾಂಕಾ ಟ್ರಂಪ್ ಹೇಳಿದ್ದಾರೆ.

ಚುನಾವಣೆ ಫಲಿತಾಂಶಗಳ ನಂತರ, ಅಮೆರಿಕದ ಸಂಸತ್ತು ಕ್ಯಾಪಿಟಲ್‌ ಕಟ್ಟಡದ ಮೇಲೆ ನಡೆದ ದಾಳಿಯ ಕುರಿತು ತನಿಖೆ ನಡೆಸುತ್ತಿರುವ ‘ಕಾಂಗ್ರೆಸ್‌ ಸಮಿತಿ’ಯ ಎದುರು ಇವಾಂಕಾ ಈ ಅಭಿಪ್ರಾಯ ದಾಖಲಿಸಿದ್ದಾರೆ. ನಾಲ್ಕು ವರ್ಷಗಳ ಅಧಿಕಾರವಧಿಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರಿಗೆ ಇವಾಂಕಾ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು. ಅಲ್ಲದೇ, ವಿಶ್ವಾಸಾರ್ಹ ತಂಡದಲ್ಲಿ ಇವಾಂಕಾ ಅವರೂ ಒಬ್ಬರಾಗಿದ್ದರು.

‘ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಸಾಬೀತು ಮಾಡಲು ನ್ಯಾಯಾಂಗ ಇಲಾಖೆಗೆ ಸೂಕ್ತ ಸಾಕ್ಷ್ಯಗಳು ಸಿಕ್ಕಿಲ್ಲ. ಹೀಗಾಗಿ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಟ್ರಂಪ್‌ ಅವರ ವಾದ ಸಮಂಜಸವಲ್ಲ’ ಎಂಬ ಅಟಾರ್ನಿ ಜನರಲ್ ವಿಲಿಯಂ ಬಾರ್ ಅವರ ಹೇಳಿಕೆಯನ್ನು ಗೌರವಿಸುತ್ತೇನೆ. ಅವರು ಹೇಳಿದ್ದನ್ನು ನಾನು ನಂಬುತ್ತೇನೆ’ ಎಂದೂ ಇವಾಂಕಾ ಹೇಳಿದ್ದಾರೆ.

ADVERTISEMENT

ತನಿಖಾಧಿಕಾರಿಗಳ ಎದುರು ಬಾರ್ ಹಾಜರಾದ ವಿಡಿಯೊವನ್ನು ಸಮಿತಿ ಪ್ರದರ್ಶಿಸಿತು. ಚುನಾವಣೆ ಅಕ್ರಮದ ಕುರಿತ ಟ್ರಂಪ್‌ ಆರೋಪಗಳನ್ನು ಬಾರ್‌ ತಳ್ಳಿಹಾಕಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ನಂತರ 2021ರ ಜನವರಿ 6ರಂದು ಟ್ರಂಪ್ ಶ್ವೇತಭವನದ ಹೊರಗೆ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಪ್ರಚೋದನಕಾರಿ ಮಾತುಗಳನ್ನು ಆಡಿದ್ದರು. ಇದಾದ ಸ್ವಲ್ಪ ಸಮಯದಲ್ಲೇ ಅವರ ಬೆಂಬಲಿಗರು ಅಮೆರಿಕ ‘ಕ್ಯಾಪಿಟಲ್‌’ ಕಟ್ಟಡದ ಮೇಲೆ ದಾಳಿ ನಡೆಸಿದ್ದರು.

ಅಮೆರಿಕದ ಪ್ರಜಾಪ್ರಭುತ್ವದಲ್ಲಿ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಕ್ಯಾಪಿಟಲ್‌ ಹಿಲ್ಸ್‌ಗೆ ಮಹತ್ವದ ಸ್ಥಾನವಿದೆ. ‘ಯುಎಸ್‌ ಕ್ಯಾಪಿಟಲ್’‌ ಎಂಬ ಹೆಸರಿನ ಸಂಸತ್‌ ಭವನದ ಜತೆಗೆ ಅಲ್ಲಿನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಹಲವು ಕಟ್ಟಡಗಳು ಇಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.