ADVERTISEMENT

ರಶ್ದಿ ಹಲ್ಲೆ ಖಂಡಿಸಿದ್ದ ಹ್ಯಾರಿ ಪಾಟರ್ ಲೇಖಕಿ ಜೆ.ಕೆ ರೌಲಿಂಗ್‌ಗೆ ಜೀವ ಬೆದರಿಕೆ

ಪಿಟಿಐ
Published 14 ಆಗಸ್ಟ್ 2022, 10:33 IST
Last Updated 14 ಆಗಸ್ಟ್ 2022, 10:33 IST
ಜೆ.ಕೆ ರೌಲಿಂಗ್‌
ಜೆ.ಕೆ ರೌಲಿಂಗ್‌   

ಲಂಡನ್: ಸಲ್ಮಾನ್ ರಶ್ದಿ ಅವರ ಹತ್ಯೆ ಯತ್ನವನ್ನು ಖಂಡಿಸಿದ್ದ ಹ್ಯಾರಿ ಪಾಟರ್ ಖ್ಯಾತಿಯ ಲೇಖಕಿ ಜೆ.ಕೆ. ರೌಲಿಂಗ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ.

ಟ್ವಿಟರ್‌ನಲ್ಲಿ ನಿನ್ನೆ ರಶ್ದಿ ಅವರ ಹತ್ಯೆಯನ್ನು ಖಂಡಿಸಿ ಬ್ರಿಟಿಷ್ ಲೇಖಕಿ ರೌಲಿಂಗ್ ಅವರು, ‘ಇದೊಂದು ಭಯಾನಕ ಸುದ್ದಿ, ರಶ್ದಿ ಬೇಗ ಗುಣಮುಖರಾಗಲಿ’ ಎಂದು ಹಾರೈಸಿದ್ದರು.

ಇದಕ್ಕೆ ಮೀರ್ ಆಸೀಫ್ ಅಜೀಜ್ ಎನ್ನುವ ಕಮೆಂಟ್‌ನಲ್ಲಿ, ‘ಜಾಸ್ತಿ ತಲೆ ಕೆಡಿಸಿಕೊಳ್ಳಬೇಡ, ಮುಂದಿನ ಸರದಿ ನಿನ್ನದು’ ಎಂದು ‘ನಿಮ್ಮನ್ನೂ ಕೂಡ ರಶ್ದಿ ಹಲ್ಲೆ ಮಾಡಿದ ಹಾಗೇ ಮಾಡಲಾಗುವುದು’ ಎನ್ನುವ ಅರ್ಥದಲ್ಲಿ ಬೆದರಿಕೆ ಹಾಕಿದ್ದ.

ADVERTISEMENT

ಇದನ್ನು ಗಂಭೀರವಾಗಿ ತೆಗೆದುಕೊಂಡ ರೌಲಿಂಗ್ ಅವರು, ಟ್ವಿಟರ್ ಸಪೋರ್ಟ್‌ ಟೀಂನವರಿಗೆ ‘ಇದಕ್ಕಾಗಿ ಏನಾದರೂ ಸಹಾಯ ಮಾಡುವಿರಾ?’ ಎಂದು ಬೆದರಿಕೆ ಸಂದೇಶದ ಸ್ಕ್ರೀನ್ ಶಾಟ್‌ನ್ನು ಹಂಚಿಕೊಂಡಿದ್ದರು.

ಇದಕ್ಕೆ ಟ್ವಿಟರ್ ಕೂಡ ಸ್ಪಂದಿಸಿದ್ದು ಬೆದರಿಕೆ ಹಾಕಿದವನ ಅಕೌಂಟ್‌ನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದೆ. ಪ್ರಸಿದ್ಧ ಸಿನಿಮಾ ನಿರ್ಮಾಣ ಸಂಸ್ಥೆಯಾದ ವಾರ್ನರ್ ಬದ್ರರ್ಸ್ ಪಿಕ್ಚರ್ಸ್‌ ರೌಲಿಂಗ್ ಅವರಿಗೆ ಜೀವ ಬೆದರಿಕೆ ಬಂದಿರುವುದನ್ನು ಖಂಡಿಸಿದೆ.

ಆಸೀಫ್ ಅಜೀಜ್ ಎನ್ನುವ ವ್ಯಕ್ತಿ ಇದಕ್ಕೂ ಮುನ್ನ ರಶ್ದಿ ಮೇಲಿನ ದಾಳಿಯನ್ನು ಬೆಂಬಲಿಸಿ, ರಶ್ದಿ ಅವರ ಮೇಲೆ ಹಲ್ಲೆ ಮಾಡಿದ್ದ ಹಾದಿ ಮಟರ್ ಒಬ್ಬ ಕ್ರಾಂತಿಕಾರಿ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ.

ಇನ್ನು ಲೇಖಕ ಸಲ್ಮಾನ್ ರಶ್ದಿ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್‌ ತೆಗೆಯಲಾಗಿದೆ. ಅವರು ಈಗ ಮಾತನಾಡುತ್ತಿದ್ದಾರೆ ಎಂದು ಷಟೌಕ್ವಾ ಸಂಸ್ಥೆಯ ಅಧ್ಯಕ್ಷರು ಹೇಳಿದ್ದಾರೆ.

ಪಶ್ಚಿಮ ನ್ಯೂಯಾರ್ಕ್‌ನ ಷಟೌಕ್ವಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ದಾಳಿ ನಡೆಸಲಾಗಿತ್ತು. ಅವರನ್ನು ಚಾಕುವಿನಿಂದ ಹಲವು ಬಾರಿ ಇರಿಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.