ADVERTISEMENT

ವಿಶ್ವಸಂಸ್ಥೆ ಅಧಿವೇಶನ: ಭಯೋತ್ಪಾದನೆ ನಿಗ್ರಹ, ಶಾಂತಿ ಚರ್ಚೆಗೆ ಭಾರತದ ಆದ್ಯತೆ

ಪಿಟಿಐ
Published 19 ಸೆಪ್ಟೆಂಬರ್ 2022, 10:56 IST
Last Updated 19 ಸೆಪ್ಟೆಂಬರ್ 2022, 10:56 IST
ಜೈಶಂಕರ್‌
ಜೈಶಂಕರ್‌   

ನ್ಯೂಯಾರ್ಕ್: ವಿಶ್ವಸಂಸ್ಥೆಯ 77ನೇ ಉನ್ನತ ಮಟ್ಟದ ಸಾಮಾನ್ಯ ಅಧಿವೇಶನದಲ್ಲಿ ಭಾಗವಹಿಸುವುದು ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಇಲ್ಲಿಗೆ ಆಗಮಿಸಿದರು.

ಸಾಮಾನ್ಯ ಅಧಿವೇಶನ ಮಂಗಳವಾರ ಆರಂಭವಾಗಲಿದೆ. ವಿವಿಧ ರಾಷ್ಟ್ರಗಳ ಜೊತೆಗಿನ ದ್ವಿಪಕ್ಷೀಯ ಬಾಂಧವ್ಯ ಚರ್ಚೆ, ವಿವಿಧ ದೇಶಗಳ ಪ್ರತಿನಿಧಿಗಳ ಜೊತೆಗಿನ ಭೇಟಿ, ಫ್ರಾನ್ಸ್‌, ಭಾರತ ಮತ್ತು ಯುಎಇ ನಡುವಣ ತ್ರಿಪಕ್ಷೀಯ ಮಾತುಕತೆಯಲ್ಲಿಯೂ ಭಾಗವಹಿಸುವರು ಎಂದು ಹೇಳಿಕೆ ತಿಳಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ವಿಶ್ವಸಂಸ್ಥೆಯ ರಾಯಭಾರ ಕಚೇರಿಯ ಭಾರತದ ಶಾಶ್ವತ ಪ್ರತಿನಿಧಿ ರುಚಿರಾ ಕಂಬೋಜ್‌ ಅವರು, ವಿದೇಶಾಂಗ ಸಚಿರು ಇಲ್ಲಿಗೆ ಆಗಮಿಸಿದ್ದು, ವಿವಿಧ ದ್ವಿಪಕ್ಷೀಯ ಬಾಂಧವ್ಯ ಕುರಿತ ಚರ್ಚೆಯಲ್ಲಿ ಭಾಗಿಯಾಗುವರು ಎಂದು ತಿಳಿಸಿದ್ದಾರೆ.

ADVERTISEMENT

ಭಯೋತ್ಪಾದನೆ ನಿಗ್ರಹ, ಶಾಂತಿ ಸ್ಥಾಪನೆ, ತಾಪಮಾನ ಬದಲಾವಣೆ ತಡೆ, ವಿಶ್ವದಾದ್ಯಂತ ಕೋವಿಡ್‌ ಲಸಿಕೆ ಅನಾಯಾಸವಾಗಿ ಲಭ್ಯವಾಗಲಿದೆ ಎಂಬುದರ ಖಾತರಿಪಡಿಸಿಕೊಳ್ಳುವಿಕೆ –ಭಾರತ ಚರ್ಚೆಗೆ ಆದ್ಯತೆ ನೀಡಲಿರುವ ಕ್ಷೇತ್ರಗಳಾಗಿವೆ ಎಂದು ಹೇಳಿದ್ದಾರೆ.

ಜೈಶಂಕರ್ ಅವರು ಅಧಿವೇಶನದಲ್ಲಿ ಸೆ.24ರಂದು ಮಾತನಾಡುವರು. ಮೊದಲ ದಿನವಾದ ಮಂಗಳವಾರ ಅಲ್ಬೇನಿಯ, ಮಾಲ್ಟಾ, ಈಜಿಪ್ಟ್, ಇಂಡೊನೇಷಿಯದ ವಿದೇಶಾಂಗ ಸಚಿವರು ಹಾಗೂ 77ನೇ ಅಧಿವೇಶನದ ಅಧ್ಯಕ್ಷರ ಜೊತೆಗೂ ಚರ್ಚಿಸುವರು.

ಭಾರತದ ಶಾಶ್ವತ ಮಿಷನ್‌ ಈ ಬಗ್ಗೆ ವಿಡಿಯೊ ಟ್ವೀಟ್ ಮಾಡಿದ್ದು, ಅಧಿವೇಶನದಲ್ಲಿ ಭಾರತದ ಚರ್ಚೆಗೆ ಪ್ರಧಾನಿ ಮೋದಿ ಉಲ್ಲೇಖಿಸಿರುವ ‘ಐದು ಎಸ್’ಗಳಾದ –ಸನ್ಮಾನ, ಸಂವಾದ, ಸಹಯೋಗ, ಶಾಂತಿ ಮತ್ತು ಸಮೃದ್ಧಿ–ಆಧಾರವಾಗಿವೆ ಎಂದಿದೆ.

ಸೆ.28ರವರೆಗೆ ಅಮೆರಿಕ ಪ್ರವಾಸದಲ್ಲಿ ಜೈಶಂಕರ್‌ ಅವರು ವಾಷಿಂಗ್ಟನ್ ಡಿ.ಸಿಗೂ ಭೇಟಿ ನೀಡುವರು. ಅಲ್ಲದೆ, ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ ಅವರನ್ನು ಭೇಟಿಯಾಗಿ ಚರ್ಚಿಸುವರು ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.