ಬೀಜಿಂಗ್: ಭಾರತ–ಚೀನಾ ನಡುವಿನ ಬಾಂಧವ್ಯ, ಸಂಬಂಧ ವೃದ್ಧಿಗೊಳ್ಳುವುದರಿಂದ ಉಭಯ ರಾಷ್ಟ್ರಗಳಿಗೆ ಅನುಕೂಲಕರವಾದ ಫಲಿತಾಂಶ ದೊರೆಯಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೋಮವಾರ ಹೇಳಿದ್ದಾರೆ.
ಸಿಂಗಾಪುರ ಪ್ರವಾಸ ಮುಕ್ತಾಯಗೊಳಿಸಿ, ಚೀನಾದ ತಿಯಾನ್‌ಜಿನ್ ನಗರದಲ್ಲಿ ಜುಲೈ 15ರಂದು ನಡೆಯುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಜೈಶಂಕರ್ ಚೀನಾಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಚೀನಾದ ಉಪಾಧ್ಯಕ್ಷ ಹನ್ ಚುಂಗ್ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಜೈಶಂಕರ್, ‘ಕಳೆದ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಡುವಿನ ಮಾತುಕತೆಯ ಬಳಿಕ ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಯಾಗುತ್ತಿದೆ. ಈಗ ನನ್ನ ಭೇಟಿ ವೇಳೆ ನಾನು ತೆಗೆದುಕೊಳ್ಳಲಿರುವ ನಿರ್ಧಾರಗಳು ಕೂಡ ಈ ಬಾಂಧವ್ಯವನ್ನು ಬಲಗೊಳಿಸುತ್ತವೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.
‘ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನಾರಂಭಗೊಳಿಸಿರುವ ವಿಚಾರವು ಭಾರತದಲ್ಲಿ ಅತಿಹೆಚ್ಚು ಮನ್ನಣೆ ಗಳಿಸಿದೆ. ಭಾರತ–ಚೀನಾ ನಡುವಿನ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳಿಂದ ಎರಡೂ ರಾಷ್ಟ್ರಕ್ಕೂ ಅನುಕೂಲವಾಗಲಿದೆ. ಈ ವಿಚಾರವನ್ನು ಹನ್ ಅವರಿಗೂ ತಿಳಿಸಿದ್ದೇನೆ’ ಎಂದಿದ್ದಾರೆ.
‘ಜಾಗತಿಕ ಸ್ಥಿತಿಗತಿ ಸಂಕೀರ್ಣವಾಗಿರುವ ಈ ಸಂಬಂಧದಲ್ಲಿ ನೆರಹೊರೆಯ ರಾಷ್ಟ್ರಗಳಾದ ಹಾಗೂ ಪ್ರಮುಖ ಆರ್ಥಿಕತೆಗಳಾದ ನಾವು ಪರಸ್ಪರ ಅಭಿಪ್ರಾಯಗಳನ್ನು, ದೃಷ್ಟಿಕೋನಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅಗತ್ಯವಿದೆ’ ಎಂದೂ ಪ್ರತಿಪಾದಿಸಿದ್ದಾರೆ.
ಪಾಕ್ ವಿದೇಶಾಂಗ ಸಚಿವರ ಭೇಟಿ:
ಶಾಂಘೈ ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಭಾಗಿಯಾಗಲು ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ಡರ್ ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರ ಆಹ್ವಾನದ ಮೇರೆಗೆ ಇಶಾಕ್ ಆಗಮಿಸಲಿದ್ದು, ಶಾಂಘೈನ ಇತರೆ ಸದಸ್ಯ ರಾಷ್ಟ್ರಗಳ ಸಚಿವರ ಜತೆಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಆದರೆ, ಭಾರತದೊಂದಿಗೆ ಯಾವುದೇ ದ್ವಿಪಕ್ಷೀಯ ಸಭೆ ನಡೆಸಲು ನಿರ್ಧರಿಸಲಾಗಿಲ್ಲ ಎಂದು ಪಾಕ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
‘ವಿವಾದ ಸಂಘರ್ಷ ಸಲ್ಲದು’:
ಎರಡು ರಾಷ್ಟ್ರಗಳ ನಡುವಿನ ಸಂಬಂಧವು ಸುಸ್ಥಿರ ಅಭಿವೃದ್ಧಿಯತ್ತ ಅವುಗಳನ್ನು ಕೊಂಡೊಯ್ಯಬೇಕೇ ವಿನಃ ಉಭಯ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಸ್ಪರ್ಧಾತ್ಮಕ ನಿಲುವುಗಳು ಸಂಘರ್ಷವಾಗಿ ಬದಲಾಗಬಾರದು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಅಲ್ಲದೇ ನಿರ್ಬಂಧಿತ ವ್ಯಾಪಾರ ನೀತಿಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂದೂ ಕರೆ ನೀಡಿದ್ದಾರೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಮಾತುಕತೆ ನಡೆಸುವ ವೇಳೆ ಜೈಶಂಕರ್ ಈ ಸಲಹೆ ನೀಡಿದ್ದಾರೆ. ಅಮೆರಿಕದ ನೀತಿಗಳಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಚೀನಾ ಸರ್ಕಾರವು ಕೆಲವು ನಿಗದಿತ ಖನಿಜ ಸಂಪನ್ಮೂಲಗಳ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಭಾರತ–ಚೀನಾ ನಡುವಿನ ಸಂಬಂಧವನ್ನು ಸುಧಾರಿಸುವ ಕ್ರಮಗಳಲ್ಲಿ ಪ್ರಗತಿ ಕಂಡುಬಂದಿದೆ. ಈಗ ಉಭಯ ರಾಷ್ಟ್ರಗಳು ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಪರಿಸ್ಥಿತಿಯನ್ನು ತಿಳಿಯಾಗಿಸುವಲ್ಲಿ ಗಮನಹರಿಸಬೇಕು ಎಂದೂ ಜೈಶಂಕರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.