ಟೊಕಿಯೊ: ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ವಿಸ್ತರಿಸುವುದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿ ನಡೆದ 15ನೇ ಭಾರತ–ಜಪಾನ್ ಶೃಂಗಸಭೆಯಲ್ಲಿ ಜಪಾನ್ ಪ್ರಧಾನಿ ಶಿಗೆರು ಇಶಿಬಾ ಅವರೊಂದಿಗೆ ಮಾತುಕತೆ ನಡೆಸಿದರು.
ಭಾರತದಲ್ಲಿ ಮುಂದಿನ 10 ವರ್ಷಗಳಲ್ಲಿ ಅಂದಾಜು ₹60 ಸಾವಿರ ಕೋಟಿಯಷ್ಟು ಹೂಡಿಕೆ ಮಾಡುವುದಾಗಿ ಜಪಾನ್ ಹೆಳಿದೆ. ಸೆಮಿಕಂಡಕ್ಟರ್, ಶುದ್ಧ ಇಂಧನ, ದೂರಸಂಪರ್ಕ, ಔಷಧ, ಖನಿಜಗಳು, ತಂತ್ರಜ್ಞಾನ ಕ್ಷೇತ್ರ ಸೇರಿ ಉಭಯ ದೇಶಗಳ ನಡುವೆ 13 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಮುಂದಿನ 5 ವರ್ಷಗಳಲ್ಲಿ ಕೌಶಲ ಹೊಂದಿರುವ 50 ಸಾವಿರದಷ್ಟು ಭಾರತೀಯರಿಗೆ ಜಪಾನ್‌ನಲ್ಲಿ ಉದ್ಯೋಗಾವಕಾಶವನ್ನೂ ಈ ಒಪ್ಪಂದ ಕಲ್ಪಿಸಲಿದೆ.
ಶೃಂಗಸಭೆಗೂ ಮುನ್ನ ಭಾರತ–ಜಪಾನ್ ಉದ್ಯಮ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಸ್ಥಿರತೆ, ಪ್ರಗತಿ ಮತ್ತು ಸಮೃದ್ಧಿಯಲ್ಲಿ ಭಾರತ ಮತ್ತು ಜಪಾನ್ ಜತೆಯಾಗಿ ಕೈಜೋಡಿಸಿ ಏಷ್ಯಾದ ಶತಮಾನವನ್ನು (21ನೇ ಶತಮಾನ) ರೂಪಿಸುತ್ತೇವೆ’ ಎಂದರು.
‘ಭಾರತದ ಪ್ರಗತಿಯ ಹಾದಿಯಲ್ಲಿ, ಜಪಾನ್ ಯಾವತ್ತಿಗೂ ಮಹತ್ವದ ಪಾಲುದಾರ ದೇಶ’ ಎಂದು ಸ್ಮರಿಸಿದ ಪ್ರಧಾನಿ, ಜಪಾನ್‌ನ ಉದ್ಯಮಿಗಳ ಪಾಲಿಗೆ ಭಾರತವು ‘ಚಿಮ್ಮುಹಲಗೆ’ ಎಂದು ಬಣ್ಣಿಸಿದರು.
‘ಭಾರತವು ವಿಶ್ವದಲ್ಲೇ ಅತ್ಯುತ್ತಮ ಹೂಡಿಕೆ ತಾಣ. ದೇಶವು ಆರ್ಥಿಕ ಮತ್ತು ರಾಜಕೀಯ ಸ್ಥಿರತೆಯನ್ನು ಹೊಂದಿದೆ. ಇಲ್ಲಿ ಉದ್ಯಮ ವಲಯದ ನೀತಿ ನಿರ್ಧಾರಗಳಲ್ಲಿ ಪಾರದರ್ಶಕತೆ ಮತ್ತು ಉಜ್ವಲ ಭವಿಷ್ಯ ಕಾಣಬಹುದು. ಭಾರತದಲ್ಲಿ ತೊಡಗಿಸುವ ಬಂಡವಾಳವು ಕೇವಲ ಬೆಳೆಯುತ್ತದೆ ಎನ್ನುವುದು ಮಾತ್ರವಲ್ಲ, ಅದು ದ್ವಿಗುಣಗೊಳ್ಳುತ್ತದೆ’ ಎಂದು ಪ್ರಧಾನಿ ಹೇಳಿದರು.
‘ಜಪಾನ್‌ನ ಶ್ರೇಷ್ಠತೆ ಮತ್ತು ಭಾರತದ ಮಾನದಂಡವು ಉಭಯ ದೇಶಗಳ ನಡುವೆ ಪರಿಪೂರ್ಣ ಪಾಲುದಾರಿಕೆಯನ್ನು ಸೃಷ್ಟಿಸುತ್ತದೆ’ ಎಂದ ಪ್ರಧಾನಿ, ಭಾರತವು ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಕ್ವಾಂಟಂ ಕಂಪ್ಯೂಟಿಂಗ್, ಬಾಹ್ಯಾಕಾಶ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ದಿಟ್ಟವಾದ ಮತ್ತು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಜಪಾನ್‌ನ ತಂತ್ರಜ್ಞಾನ ಮತ್ತು ಭಾರತದ ಸಾಮರ್ಥ್ಯವು ಒಂದುಗೂಡಿದಾಗ ಈ ಶತಮಾನದ ತಾಂತ್ರಿಕ ಕ್ರಾಂತಿ ಸಂಭವಿಸುತ್ತದೆ’ ಎಂದರು.
'ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ಶೀಘ್ರದಲ್ಲೇ ನಾವು ವಿಶ್ವದ ಮೂರನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕದ ನಿರ್ಧಾರದ ಬೆನ್ನಲ್ಲೇ, ಮೋದಿ ಅವರ ಪೂರ್ವ ಏಷ್ಯಾ ರಾಷ್ಟ್ರಗಳ ಭೇಟಿಯು ಮಹತ್ವ ಪಡೆದುಕೊಂಡಿದೆ.
ಭಾರತ–ಜಪಾನ್ ನಡುವಿನ ಒಪ್ಪಂದವು ಎರಡು ದೇಶಗಳಿಗೆ ಮಾತ್ರವಲ್ಲ ವಿಶ್ವ ಶಾಂತಿ ಮತ್ತು ಸುಸ್ಥಿರತೆ ದೃಷ್ಟಿಯಿಂದಲೂ ಮಹತ್ವದ್ದುನರೇಂದ್ರ ಮೋದಿ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.