ADVERTISEMENT

ಚೀನಾ ಜೊತೆ ಮಾತುಕತೆಗೆ ಸಿದ್ದ ಎಂದ ಜಪಾನ್‌ ಪ್ರಧಾನಿ ಸನೇ ತಕೈಚಿ

ಏಜೆನ್ಸೀಸ್
Published 9 ಫೆಬ್ರುವರಿ 2026, 15:20 IST
Last Updated 9 ಫೆಬ್ರುವರಿ 2026, 15:20 IST
ಜಪಾನ್‌ ಪ್ರಧಾನಿ ಸನೇ ತಕೈಚಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಜಪಾನ್‌ ಪ್ರಧಾನಿ ಸನೇ ತಕೈಚಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು   

ಟೋಕಿಯೊ: ‘ಚೀನಾ ಜತೆಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಆ ದೇಶದ ಜತೆ ಮಾತುಕತೆಗೆ ಸಿದ್ಧ’ ಎಂದು ಜಪಾನ್‌ ಪ್ರಧಾನಿ ಸನೇ ತಕೈಚಿ ಸೋಮವಾರ ಹೇಳಿದ್ದಾರೆ.

ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮರುದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚೀನಾ ಜತೆ ಮಾತುಕತೆಗೆ ಮುಕ್ತರಾಗಿದ್ದೇವೆ. ನಾವು ಈಗಾಗಲೇ ಆ ದೇಶದ ಜತೆ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದು, ಆ ಪ್ರಕ್ರಿಯೆ ಮುಂದುವರಿಸುತ್ತೇವೆ’ ಎಂದಿದ್ದಾರೆ.

‘ದ್ವೀಪ ರಾಷ್ಟ್ರ ತೈವಾನ್‌ ವಿರುದ್ಧ ಚೀನಾ ಕ್ರಮ ಕೈಗೊಂಡರೆ ತನ್ನ ಸೇನೆ ಮಧ್ಯಪ್ರವೇಶಿಸಲಿದೆ’ ಎಂದು ತಕೈಚಿ ಅವರು ಕಳೆದ ನವೆಂಬರ್‌ನಲ್ಲಿ ಹೇಳಿದ್ದರು. ಹೀಗಾಗಿ, ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಉಂಟಾಗಿದೆ.

ADVERTISEMENT

ತೆರಿಗೆ ಕಡಿತ–ಪುನರುಚ್ಚಾರ: ಆಹಾರ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆಯನ್ನು ಕಡಿತಗೊಳಿಸುವ ಭರವಸೆಯನ್ನು ತಕೈಚಿ ಪುನರುಚ್ಚರಿಸಿದ್ದಾರೆ.

ಆಹಾರ ಉತ್ಪನ್ನಗಳ ಮೇಲೆ ವಿಧಿಸಿರುವ ಶೇ 8ರಷ್ಟು ಮಾರಾಟ ತೆರಿಗೆಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಿ ಜನರ ಜೀವನ ವೆಚ್ಚ ತಗ್ಗಿಸುವುದಾಗಿ ತಕೈಜಿ ಅವರು ಚುನಾವಣೆಗೂ ಮುನ್ನ ಹೇಳಿದ್ದರು. ಮತದಾರರಿಗೆ ನೀಡಿರುವ ಈ ಭರವಸೆ ಕೂಡಾ ಎಲ್‌ಡಿಪಿ ಪಕ್ಷದ ಭಾರಿ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

‘ಶೇ 8ರಷ್ಟು ತೆರಿಗೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಸಾಧ್ಯವಾದಷ್ಟು ಬೇಗ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಸನೇ ತಕೈಚಿ ಅವರಿಗೆ ಅಭಿನಂದನೆಗಳು... ನಿಮ್ಮ ಸಮರ್ಥ ನಾಯಕತ್ವದಲ್ಲಿ ಭಾರತ-ಜಪಾನ್ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸ ನನ್ನದು
ನರೇಂದ್ರ ಮೋದಿ ಪ್ರಧಾನಿ 

ಐತಿಹಾಸಿಕ ಜಯ

ಭಾನುವಾರ ನಡೆದ ಚುನಾವಣೆಯಲ್ಲಿ ತಕೈಚಿ ನೇತೃತ್ವದ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷವು (ಎಲ್‌ಡಿಪಿ) ಮೂರನೇ ಎರಡರಷ್ಟು ಬಹುಮತ ಪಡೆದಿದೆ. 465 ಸದಸ್ಯ ಬಲದ ಕೆಳಮನೆಯಲ್ಲಿ 316ರಲ್ಲಿ ಗೆಲುವು ಸಾಧಿಸಿದೆ. 1955ರಲ್ಲಿ ಸ್ಥಾಪನೆಯಾಗಿರುವ ಎಲ್‌ಡಿಪಿಯು ಚುನಾವಣೆಯಲ್ಲಿ ಇಷ್ಟೊಂದು ಸ್ಥಾನಗಳನ್ನು ಗೆದ್ದಿರುವುದು ಇದೇ ಮೊದಲು. 1986ರ ಚುನಾವಣೆಯಲ್ಲಿ 300 ಸ್ಥಾನಗಳನ್ನು ಗೆದ್ದದ್ದು ಎಲ್‌ಡಿಪಿಯ ಇದುವರೆಗಿನ ಉತ್ತಮ ಸಾಧನೆ ಆಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.