ADVERTISEMENT

ಅಮೆರಿಕ ಕ್ಯಾಪಿಟಲ್‌ ಮೇಲಿನ ದಾಳಿ ಟ್ರಂಪ್‌ ಬೆಂಬಲಿತ ಆಂತರಿಕ ಉಗ್ರರ ಕೃತ್ಯ: ಬೈಡನ್

ಏಜೆನ್ಸೀಸ್
Published 14 ಜನವರಿ 2021, 3:09 IST
Last Updated 14 ಜನವರಿ 2021, 3:09 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ಎರಡನೇ ಬಾರಿ ಮಹಾಭಿಯೋಗಕ್ಕೆ ಗುರಿಯಾಗಿರುವ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಳೆದ ವಾರ ಕ್ಯಾಪಿಟಲ್‌ ಮೇಲೆ ಟ್ರಂಪ್‌ ಬೆಂಬಲಿಗರು ನಡೆಸಿದ ದಾಳಿಯನ್ನು ಪೂರ್ವನಿಯೋಜಿತ ಮತ್ತು ಸಂಘಟಿತ ಕೃತ್ಯವೆಂದು ಬೈಡನ್‌ ಪ್ರತಿಪಾದಿಸಿದ್ದಾರೆ. ಈ ಹಿಂಸಾಚಾರಕ್ಕೆ ಟ್ರಂಪ್‌ ಪ್ರಚೋದನೆ ನೀಡಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

'ನಮ್ಮ ಪ್ರಜಾಪ್ರಭುತ್ವದ ಮೇಲೆ ಕಳೆದ ವಾರ ಅನಾಗರಿಕ ದಾಳಿಯಾಗಿದ್ದನ್ನು ನಾವು ನೋಡಿದ್ದೇವೆ. ಇದು ನಮ್ಮ ರಾಷ್ಟ್ರದ 244 ವರ್ಷಗಳ ಇತಿಹಾಸದಲ್ಲಿ ಕಂಡು ಕೇಳರಿಯದ ಕೃತ್ಯವಾಗಿತ್ತು' ಎಂದು ಬೈಡನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಹಿಂಸಾಚಾರಕ್ಕೆ ಡೊನಾಲ್ಡ್‌ ಟ್ರಂಪ್ ಪ್ರಚೋದಿಸಿದ್ದಾರೆ ಎಂದು ಆರೋಪಿಸಿರುವ ಅವರು, 'ಕ್ಯಾಪಿಟಲ್‌ ಮೇಲೆ ನಡೆದ ದಾಳಿಯನ್ನು ಪೂರ್ವನಿಯೋಜಿತ ಮತ್ತು ಸಂಘಟಿತ ಕೃತ್ಯವಾಗಿತ್ತು. ಇದನ್ನು ರಾಜಕೀಯ ಉಗ್ರಗಾಮಿಗಳು ಮತ್ತು ಆಂತರಿಕ ಭಯೋತ್ಪಾದಕರು ನಡೆಸಿದ್ದಾರೆ. ಈ ಹಿಂಸಾಚಾರಕ್ಕೆ ಟ್ರಂಪ್ ಪ್ರಚೋದಿಸಿದ್ದರು. ಇದು ಅಮೆರಿಕ ವಿರುದ್ಧ ನಡೆದ ಸಶಸ್ತ್ರ ದಂಗೆಯಾಗಿದ್ದು, ಈ ಕೃತ್ಯಕ್ಕೆ ಪ್ರಚೋದನೆ ನೀಡಿದವರೇ ಜವಾಬ್ದಾರರು' ಎಂದು ಹರಿಹಾಯ್ದಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಕಳೆದ ವಾರ ಅಮೆರಿಕ ಕ್ಯಾಪಿಟಲ್‌ಗೆ (ಸಂಸತ್) ನುಗ್ಗಿ ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಐವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.