ADVERTISEMENT

ಪ್ರಯಾಣ ನಿರ್ಬಂಧ ತೆಗೆದುಹಾಕುವ ಟ್ರಂಪ್ ಆದೇಶಕ್ಕೆ ತಡೆ ನೀಡಲು ಜೋ ಬೈಡನ್ ಯೋಜನೆ

ರಾಯಿಟರ್ಸ್
Published 19 ಜನವರಿ 2021, 5:33 IST
Last Updated 19 ಜನವರಿ 2021, 5:33 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್: ಯುರೋಪ್ ಮತ್ತು ಬ್ರೆಜಿಲ್‌ನಿಂದ ಅಮೆರಿಕದ ಪ್ರವೇಶಿಸುವುದಕ್ಕೆ ಹೇರಿರುವ ಪ್ರಯಾಣ ನಿರ್ಬಂಧವನ್ನು ಜನವರಿ 26ಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೊಳಿಸಿದ್ದಾರೆ. ಆದರೆ, ಈ ಪ್ರಯಾಣದ ನಿರ್ಬಂಧಗಳನ್ನು ತ್ವರಿತವಾಗಿ ವಿಸ್ತರಿಸಲು ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್‌ ಯೋಜಿಸಿರುವುದಾಗಿ ಬೈಡೆನ್ ವಕ್ತಾರರು ತಿಳಿಸಿದ್ದಾರೆ.

ಕೊರೊನಾ ವೈರಸ್ ಟಾಸ್ಕ್ ಫೋರ್ಸ್ ಸದಸ್ಯರು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ಬೆಂಬಲದೊಂದಿಗೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದಕ್ಕಾಗಿ ಕಳೆದ ವರ್ಷದ ಆರಂಭದಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ತೆಗೆದುಹಾಕುವ ಆದೇಶಕ್ಕೆ ಟ್ರಂಪ್ ಸೋಮವಾರ ಸಹಿ ಹಾಕಿದ್ದರು.

ಟ್ರಂಪ್‌ ನೀಡಿರುವ ಆದೇಶವು ಬಹಿರಂಗಪಡಿಸಿದ ಕೂಡಲೇ, ಬೈಡನ್ ವಕ್ತಾರೆ ಜೆನ್ ಸಾಕಿ 'ನಮ್ಮ ವೈದ್ಯಕೀಯ ತಂಡದ ಸಲಹೆಯ ಮೇರೆಗೆ ಆಡಳಿತವು, ಜನವರಿ 26ರಂದು ಈ ನಿರ್ಬಂಧಗಳನ್ನು ತೆಗೆದುಹಾಕುವ ಯಾವುದೇ ಉದ್ದೇಶ ಹೊಂದಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

'ಸಾಂಕ್ರಾಮಿಕ ರೋಗವು ಮತ್ತಷ್ಟು ಹದಗೆಡುತ್ತಿರುವುದರಿಂದ ಮತ್ತು ವಿಶ್ವದಾದ್ಯಂತ ಹೆಚ್ಚಿನ ರೂಪಾಂತರ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದಾಗಿ ಅಂತರರಾಷ್ಟ್ರೀಯ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಸಮಯ ಇದಲ್ಲ' ಎಂದು ಅವರು ಹೇಳಿದ್ದಾರೆ.

ಬೈಡನ್ ಅಧಿಕಾರಕ್ಕೇರುವವರೆಗೆ, ಟ್ರಂಪ್‌ ನೀಡಿರುವ ಆದೇಶದ ಪ್ರಕಾರ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಕೋವಿಡ್-19 ಪರೀಕ್ಷೆ ಮಾಡುವ ಮತ್ತು ಅದೇ ದಿನವೇ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಹೇರಿದ್ದ ನಿರ್ಬಂಧವು ಕೊನೆಗೊಳ್ಳುತ್ತದೆ. ಟ್ರಂಪ್ ಬುಧವಾರದಂದು ತಮ್ಮ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

ಕಳೆದ ವಾರವಷ್ಟೇ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಮುಖ್ಯಸ್ಥರು ಜನವರಿ 26 ರಿಂದ ಎಲ್ಲ ವಿಮಾನಯಾನದ ಪ್ರಯಾಣಿಕರು ಅಮೆರಿಕವನ್ನು ಪ್ರವೇಶಿಸಲು ಕೋವಿಡ್ -19 ಪರೀಕ್ಷೆಗೊಳಲಾಗಿ ನೆಗೆಟಿವ್ ವರದಿ ಅಥವಾ ಕೋವಿಡ್‌ನಿಂದ ಚೇತರಿಸಿಕೊಂಡಿರುವ ದಾಖಲೆಗಳನ್ನು ಒದಗಿಸುವ ಆದೇಶಕ್ಕೆ ಸಹಿ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.