ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆ: ಪತ್ರಕರ್ತರಿಬ್ಬರಿಗೆ ನೊಬೆಲ್ ಶಾಂತಿ ಪ್ರಶಸ್ತಿ

ರಾಯಿಟರ್ಸ್
Published 8 ಅಕ್ಟೋಬರ್ 2021, 12:16 IST
Last Updated 8 ಅಕ್ಟೋಬರ್ 2021, 12:16 IST
ಫಿಲಿಪ್ಪೀನ್ಸ್‌ನ  ಮರಿಯಾ ರೆಸ್ಸಾ, ರಷ್ಯಾದ ಡಿಮಿಟ್ರಿ ಮುರಾಟೋವ್
ಫಿಲಿಪ್ಪೀನ್ಸ್‌ನ  ಮರಿಯಾ ರೆಸ್ಸಾ, ರಷ್ಯಾದ ಡಿಮಿಟ್ರಿ ಮುರಾಟೋವ್    

ಓಸ್ಲೊ (ಎಪಿ):ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗಾಗಿ ಶ್ರಮಿಸಿದ ಇಬ್ಬರು ಪತ್ರಕರ್ತರಾದ ಫಿಲಿಪ್ಪೀನ್ಸ್‌ನ ಮರಿಯಾ ರೆಸ್ಸಾ ಮತ್ತು ರಷ್ಯಾದ ಡಿಮಿಟ್ರಿ ಮುರಾಟೋವ್ ಅವರಿಗೆ ಶುಕ್ರವಾರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ.

ವಿಶ್ವದಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪ್ರಶಸ್ತಿ ಆಯ್ಕೆ ಸಮಿತಿಯು, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಈ ಇಬ್ಬರೂ ಪತ್ರಕರ್ತರು ನಡೆಸಿದ ಅವಿರತ ಪ್ರಯತ್ನ ಮತ್ತು ಧೈರ್ಯದ ಹೋರಾಟಕ್ಕಾಗಿ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದೆ.

‘ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯವು ವಿಶ್ವದಲ್ಲಿ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಅದರ ರಕ್ಷಣೆಗಾಗಿ ನಿಲ್ಲುವ ಎಲ್ಲ ಪತ್ರಕರ್ತರನ್ನು ಈ ಇಬ್ಬರೂ ಪ್ರಶಸ್ತಿ ಪುರಸ್ಕೃತರು ಪ್ರತಿನಿಧಿಸುತ್ತಾರೆ’ ಎಂದು ನಾರ್ವೆಯ ನೊಬೆಲ್ ಆಯ್ಕೆ ಸಮಿತಿ ಅಧ್ಯಕ್ಷೆ ಬೆರಿಟ್ ರೀಸ್ ಆಂಡರ್‌ಸನ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ನೊಬೆಲ್‌ ಪ್ರಶಸ್ತಿಯನ್ನು ಸ್ಥಾಪಿಸಿದ ಆಲ್ಫ್ರೆಡ್‌ ನೊಬೆಲ್‌ ಅವರ ಪುಣ್ಯಸ್ಮರಣೆಯಾದ ಡಿ.10ರಂದು ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಚಿನ್ನದ ಪದಕ ಮತ್ತು ₹8.55 ಕೋಟಿ ನಗದು (10 ಮಿಲಿಯನ್ ಸ್ವೀಡಿಷ್ ಕ್ರೋನರ್) ಒಳಗೊಂಡಿರಲಿದೆ.

2012ರಲ್ಲಿ ಆರಂಭವಾದ ‘ರಾಪ್ಲರ್’ ಎಂಬ ನ್ಯೂಸ್‌ ವೆಬ್‌ಸೈಟ್‌ ಸಹ ಸ್ಥಾಪಕರಲ್ಲಿ ರೆಸ್ಸಾ ಒಬ್ಬರು. ‘ರಾಪ್ಲರ್‌’ ಮತ್ತು ರೆಸ್ಸಾ, ಡುಟರ್ಟೆ ಆಡಳಿತದ ವಿವಾದಗಳು, ಮಾದಕದ್ರವ್ಯ ವಿರೋಧಿ ಅಭಿಯಾನದ ಮೇಲೆ ನಿರ್ಣಾಯಕ ಗಮನ ಕೇಂದ್ರೀಕರಿಸಿದೆ. ಸಾಮಾಜಿಕ ಮಾಧ್ಯಮಗಳನ್ನು ಹೇಗೆ ನಕಲಿ ಸುದ್ದಿಗಳನ್ನು ಹರಡಲು, ವಿರೋಧಿಗಳಿಗೆ ಕಿರುಕುಳ ನೀಡಲು ಕುಶಲತೆಯಿಂದ ಬಳಸಲಾಗುತ್ತಿದೆ ಎನ್ನುವುದನ್ನು ರೆಸ್ಸಾ ಬೆಳಕಿಗೆ ತಂದಿದ್ದಾರೆ ಎಂದು ನೊಬೆಲ್ ಸಮಿತಿ ಹೇಳಿದೆ.

ಮುರಾಟೋವ್ ಅವರು 1993ರಲ್ಲಿ ರಷ್ಯಾದ ಸ್ವತಂತ್ರ ಪತ್ರಿಕೆ ‘ನೊವಾಯಾ ಗೆಜೆಟಾ’ ಸ್ಥಾಪಕರಲ್ಲಿ ಒಬ್ಬರು. ಇಂದಿಗೂ ರಷ್ಯಾದಲ್ಲಿ ಅತ್ಯಂತ ಸ್ವತಂತ್ರ ಪತ್ರಿಕೆಯಾಗಿ ಉಳಿದಿರುವ ನೊವಾಯಾ ಗೆಜೆಟಾ, ಆಡಳಿತವನ್ನು ವಿಮರ್ಶೆಯಿಂದ ನೋಡುವ ಮೂಲಭೂತ ಗುಣವನ್ನು ಉಳಿಸಿಕೊಂಡಿದೆ ಎಂದು ನೊಬೆಲ್ ಸಮಿತಿ ಹೇಳಿದೆ.

1935ರ ನಂತರ ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ಶಾಂತಿ ಪ್ರಶಸ್ತಿ ಘೋಷಣೆಯಾಗಿದೆ. ಜರ್ಮನಿಯ ಪತ್ರಕರ್ತ ಕಾರ್ಲ್‌ ವಾನ್‌ ಒಸಿಟೆಸ್ಕಿ ಅವರು ತಮ್ಮ ದೇಶ ಜಾಗತಿಕ ಯುದ್ಧದ ನಂತರ ಹೇಗೆ ಮತ್ತೆ ಶಸ್ತ್ರಸಜ್ಜಿತವಾಗಲು ಆರಂಭಿಸಿತ್ತು ಎಂಬುದನ್ನು ಜಗತ್ತಿಗೆ ತಿಳಿಸಿದ್ದರು. ಅದಕ್ಕಾಗಿ ಅವರಿಗೆ ಶಾಂತಿ ಪ್ರಶಸ್ತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.