ADVERTISEMENT

ಕಾಬೂಲ್‌ನಿಂದ ಜನರ ಸ್ಥಳಾಂತರ ಪ್ರಕ್ರಿಯೆ ಇನ್ನಷ್ಟು ತ್ವರಿತ: ಜೋ ಬೈಡನ್‌

ಏಜೆನ್ಸೀಸ್
Published 23 ಆಗಸ್ಟ್ 2021, 6:03 IST
Last Updated 23 ಆಗಸ್ಟ್ 2021, 6:03 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ‘ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಿಂದ ಅಮೆರಿಕನ್ನರು ಮತ್ತು ಇತರ ಸಾವಿರಾರು ಜನರನ್ನು ಸ್ಥಳಾಂತರಗೊಳಿಸುವ ಪ್ರಕ್ರಿಯೆಯು ಅತ್ಯಂತ ಕಠಿಣ ಮತ್ತು ದುಃಖದಾಯಕವಾಗಿದೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತಗೊಳಿಸಲಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.

ಈ ಬಗ್ಗೆ ಭಾನುವಾರ ಶ್ವೇತಭವನದಲ್ಲಿ ಮಾತನಾಡಿದ ಅವರು,‘ ಈ ಸ್ಥಳಾಂತರ ಪ್ರಕ್ರಿಯೆಯನ್ನು ಯಾವಾಗ ಆರಂಭಿಸಿದ್ದರೂ ಅಫ್ಗಾನಿಸ್ತಾನದಿಂದ ಜನರನ್ನು ಕರೆತರುವುದೇ ಇಷ್ಟೇ ಕಠಿಣ ಮತ್ತು ನೋವು ನೀಡುತ್ತಿತ್ತು. ನಾವು ಒಂದು ತಿಂಗಳ ಹಿಂದೆ ಅಥವಾ ತಿಂಗಳ ಆರಂಭದಿಂದಲೇ ಜನರ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದರೂ, ಜನರು ನೋವನ್ನು ಅನುಭವಿಸುತ್ತಿದ್ದರು. ಇಂತಹ ದೃಶ್ಯಗಳು ಆಗಲೂ ದೂರದರ್ಶನದಲ್ಲಿ ನೋಡಲು ಸಿಗುತ್ತಿತ್ತು’ ಎಂದರು.

‘ಆಗಸ್ಟ್‌ 31ರೊಳಗೆ ಸ್ಥಳಾಂತರ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ಗಡುವನ್ನು ನಿಗದಿ ಮಾಡಲಾಗಿತ್ತು. ಆದರೆ, ಈ ಗಡುವನ್ನು ವಿಸ್ತರಿಸುವ ಕುರಿತಾಗಿ ಸೇನೆಯೊಂದಿಗೆ ಚರ್ಚಿಸಲಾಗುತ್ತಿದೆ. ಈ ಸಮಯವನ್ನು ವಿಸ್ತರಿಸುವ ಪರಿಸ್ಥಿತಿ ಎದುರಾಗದಿರಲಿ ಎಂಬುದು ನಮ್ಮ ಆಶಯ. ಆದರೂ, ಈ ಬಗ್ಗೆ ತಾಲಿಬಾನ್‌ ಜತೆ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ’ ಎಂದು ಅವರು ಹೇಳಿದರು.

ADVERTISEMENT

‘ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 3 ಗಂಟೆಗೆ ಕೊನೆಗೊಂಡಂತೆ 12 ಗಂಟೆಗಳ ಅವಧಿಯಲ್ಲಿ ಅಮೆರಿಕ ಸೇನೆಯ ಏಳು C-17 ಮತ್ತು ಒಂದು C-130 ವಿಮಾನಗಳ ಮೂಲಕ ಸುಮಾರು 1700 ಪ್ರಯಾಣಿಕರನ್ನು ಕರೆದೊಯ್ಯಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಮಿತ್ರಪಡೆಗಳ 39 ವಿಮಾನಗಳ ಮೂಲಕ3,400 ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.

ಅಮೆರಿಕವು ಆಗಸ್ಟ್‌ 14ರಿಂದ ಈವರೆಗೆ 30,300 ಮಂದಿಯನ್ನು ಸ್ಥಳಾಂತರಿಸಿದೆ. ಭದ್ರತಾ ಮತ್ತು ರಾಜತಾಂತ್ರಿಕ ಸಮಸ್ಯೆಯಲ್ಲಿ ಉಂಟಾದ ಅಡಚಣೆಯಿಂದಾಗಿ ಸ್ಥಳಾಂತರ ‍ಪ್ರಕ್ರಿಯೆಯು ನಿಧಾನಗೊಂಡಿತ್ತು ಎಂದು ಅವರು ಮಾಹಿತಿ ನೀಡಿದರು.

‘ಕಾಬೂಲ್‌ನಿಂದ 3,900 ಅಮೆರಿಕನ್ನರನ್ನುಶನಿವಾರ 23 ವಿಮಾನಗಳ ಮೂಲಕ ಕರೆತರಲಾಗಿದೆ. ಈಗಾಗಲೇ ನಾವು ವಿಮಾನ ನಿಲ್ದಾಣಕ್ಕೆ ಪ್ರವೇಶವನ್ನು ಹೆಚ್ಚಿಸಿದ್ದೇವೆ. ಈ ಬಗ್ಗೆ ತಾಲಿಬಾನ್ ಜೊತೆ ಸಾಕಷ್ಟು ಚರ್ಚಿಸಿದ್ದೇವೆ. ಅವರು ಕೆಲವು ಮಾರ್ಗಗಳನ್ನು ವಿಸ್ತರಿಸಲು ಸಹಕಾರ ನೀಡಲು ಸಮ್ಮತಿಸಿದ್ದಾರೆ’ ಎಂದು ಬೈಡನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.