ADVERTISEMENT

ಕಮಲಾ ಹ್ಯಾರಿಸ್‌ ಆಯ್ಕೆ: ಭಾರತೀಯ ಮೂಲದವರ ಮಿಶ್ರ ಪ್ರತಿಕ್ರಿಯೆ

ಪಿಟಿಐ
Published 16 ಆಗಸ್ಟ್ 2020, 13:10 IST
Last Updated 16 ಆಗಸ್ಟ್ 2020, 13:10 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ಹ್ಯೂಸ್ಟನ್‌ : ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರನ್ನು ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಭಾರತೀಯ ಮೂಲದ ಅಮೆರಿಕನ್ನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡೆನ್‌ ಅವರು ಪ್ರಭಾವಿ ಭಾರತೀಯ ಸಮುದಾಯದ ಮನ ಗೆಲ್ಲುವುದಕ್ಕಾಗಿ ಕಮಲಾ ಅವರನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರು.

ಪ್ರಮುಖ ಪಕ್ಷವೊಂದರಿಂದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುತ್ತಿರುವ ಮೊದಲ ಕಪ್ಪು ವರ್ಣೀಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದ 55 ವರ್ಷ ವಯಸ್ಸಿನ ಕಮಲಾ, ಆ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದ್ದರು.

ADVERTISEMENT

‘ಡೆಮಾಕ್ರಟಿಕ್‌ ಪಕ್ಷವು ಓಲೈಕೆ ರಾಜಕಾರಣ ಮಾಡುತ್ತಿದೆ. ಕಮಲಾ ಅವರನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಘೋಷಿಸಿದ ಬಳಿಕ ಅವರ ಮೂಲದ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ.ಅವರು ಭಾರತೀಯ, ಏಷ್ಯಾ ಹಾಗೂ ಜಮೈಕಾ ಮೂಲದವರು, ಕಪ್ಪು ವರ್ಣೀಯರು ಎಂಬುದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ’ ಎಂದು ಟೆಕ್ಸಾಸ್‌ನ ಇಂಡೊ ಅಮೆರಿಕನ್‌ ಕನ್ಸರ್ವೆಟಿವ್ಸ್‌ ಸಂಸ್ಥೆಯ ಸಂಸ್ಥಾಪಕ ಸದಸ್ಯೆ ರಾಧಾ ದೀಕ್ಷಿತ್‌ ತಿಳಿಸಿದ್ದಾರೆ.

‘ಕಮಲಾ ಅವರ ಆಯ್ಕೆಯು ಸಂತಸ ತಂದಿದೆ. ಆದರೆ ಅವರ ರಾಜಕೀಯ ನಿಲುವುಗಳು ಭಾರತೀಯ ಸ್ನೇಹಿಯಾಗಿಲ್ಲ. ಇದು ಬೇಸರ ತರಿಸಿದೆ’ ಎಂದು ಓಕ್ಲಹಾಮ್‌ ಸ್ಟೇಟ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಪದ್ಮಶ್ರೀ ಪುರಸ್ಕೃತ ಸುಭಾಷ್‌ ಕಾಕ್‌ ಹೇಳಿದ್ದಾರೆ.

‘ಇದುವರೆಗೂ ತಾವು ಆಫ್ರಿಕನ್‌ ಮೂಲದವರು ಎಂದೇ ಕಮಲಾ ಗುರುತಿಸಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ಅಟಾರ್ನಿಯಾಗಿ ಅವರು ಮಾಡಿರುವ ಕೆಲಸಗಳು ಪ್ರಶ್ನಾರ್ಹವಾಗಿವೆ. ಅವರು ಕೈಗೊಂಡ ನಿರ್ಧಾರಗಳೆಲ್ಲವೂ ಭ್ರಷ್ಟಾಚಾರವನ್ನು ಉತ್ತೇಜಿಸುವಂತಿವೆ’ ಎಂದು ಅಮೆರಿಕನ್ಸ್‌4ಹಿಂದೂಸ್‌ ಸಂಸ್ಥೆಯ ಸಂಸ್ಥಾಪಕ ಆದಿತ್ಯ ಸತ್ಸಂಗಿ ದೂರಿದ್ದಾರೆ.

‘ಕಾಶ್ಮೀರ ವಿಷಯದಲ್ಲಿ ಭಾರತ ಕೈಗೊಂಡಿರುವ ನಿಲುವುಗಳನ್ನು ಟೀಕಿಸುತ್ತಲೇ ಬಂದಿರುವ ಹಾಗೂ ಪಾಕಿಸ್ತಾನದ ಪರ ಒಲವು ಹೊಂದಿರುವ ವ್ಯಕ್ತಿಯನ್ನು ನಾವು ಬೆಂಬಲಿಸಬೇಕೆ’ ಎಂದು ಲಿವಿಂಗ್‌ ಪ್ಲಾನೆಟ್‌ ಫೌಂಡೇಷನ್‌ನ ಸಂಸ್ಥಾಪಕೆ ಕುಸುಮ್‌ ವ್ಯಾಸ್‌ ಪ್ರಶ್ನಿಸಿದ್ದಾರೆ.

‘ಕಮಲಾ, ಭಾರತ ಹಾಗೂ ಹಿಂದೂ ವಿರೋಧಿಗಳನ್ನು ಬೆಂಬಲಿಸುತ್ತಾರೆ. ತಾವು ಭಾರತೀಯ ಮೂಲದವರು ಎಂದು ಹೇಳಿಕೊಳ್ಳುವುದಕ್ಕೂ ಹಿಂಜರಿಯುತ್ತಾರೆ. ಭಾರತದಲ್ಲಿರುವ ತಮ್ಮ ಕುಟುಂಬದವರನ್ನು ದ್ವೇಷಿಸುತ್ತಾರೆ. ಪಾಕಿಸ್ತಾನದ ಪರ ಮೃಧು ಧೋರಣೆ ತಳೆಯುವವರಿಗೆ ಭಾರತೀಯ ಮೂಲದವರ‍್ಯಾರೂ ಮತ ಹಾಕುವುದಿಲ್ಲ’ ಎಂದು ಅಟ್ಲಾಂಟದಲ್ಲಿ ನೆಲೆಸಿರುವ ರಾಧಿಕಾ ಸೂದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.