ADVERTISEMENT

ಕಮಲಾ ಹ್ಯಾರಿಸ್‌ ‘ಸ್ಮಾರ್ಟ್‌‘ ಕೆಲಸಗಾರ್ತಿ: ಜೊ ಬೈಡೆನ್

ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಜೊ ಬೈಡೆನ್ ಸಮರ್ಥನೆ

ಪಿಟಿಐ
Published 27 ಅಕ್ಟೋಬರ್ 2020, 6:22 IST
Last Updated 27 ಅಕ್ಟೋಬರ್ 2020, 6:22 IST
ಜೊ ಬೈಡೆನ್
ಜೊ ಬೈಡೆನ್   

ವಾಷಿಂಗ್ಟನ್‌: ‘ಕಮಲಾ ಹ್ಯಾರಿಸ್, ದೆವ್ವ ಹೊಕ್ಕವರಂತೆ ದುಡಿಯುತ್ತಾರೆ, ನಾಜೂಕಾಗಿ ಕೆಲಸ ಮಾಡುತ್ತಾರೆ. ಅವರ ವಿಸ್ತಾರವಾದ ಅನುಭವ ನಮ್ಮ ಪಕ್ಷಕ್ಕೆ ಶಕ್ತಿ ನೀಡಿದೆ‘ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಜೊ ಬೈಡೆನ್, ಉಪಾಧ್ಯಕ್ಷೆ ಹುದ್ದೆಗೆ ಸೆನೆಟರ್‌ ಕಮಲಾ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸೋಮವಾರ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೈಡೆನ್, ಕಮಲಾ ಅವರನ್ನು ಉಪಾಧ್ಯಕ್ಷೆ ಹುದ್ದೆಗೆ ನಾಮ ನಿರ್ದೇಶನ ಮಾಡಿದ್ದಕ್ಕೆ ಒಂದೊಂದೇ ಕಾರಣಗಳನ್ನು ನೀಡುತ್ತಾ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

‘ಕಮಲಾ ಅವರಲ್ಲಿ ಮೌಲ್ಯಗಳಿವೆ. ಕೆಲಸದಲ್ಲಿ ತುಂಬಾ ಸ್ಮಾರ್ಟ್‌ ಹಾಗೂ ಅಹರ್ನಿಷಿದುಡಿಯುತ್ತಾರೆ. ನಮ್ಮ ಪಕ್ಷಕ್ಕೆ ಬಲವಾದ ಬೆನ್ನೆಲುಬಾಗಿದ್ದಾರೆ. ಉತ್ತಮ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಿರುವ ವ್ಯಕ್ತಿ. ಒಕ್ಕೂಟ ವ್ಯವಸ್ಥೆಯಲ್ಲಿರುವ ದೊಡ್ಡ ರಾಜ್ಯದಲ್ಲಿ ಸೆನೆಟರ್ ಮತ್ತಿತರ ಹುದ್ದೆಗಳಲ್ಲಿ ಕೆಲಸ ಮಾಡಿ ವಿಸ್ತಾರವಾದ ಹಾಗೂ ಗಮನಾರ್ಹ ಅನುಭವ ಪಡೆದಿದ್ದಾರೆ. ಅಮೆರಿಕದ ನ್ಯಾಯಾಂಗ ಇಲಾಖೆಯನ್ನು ಮುನ್ನೆಸುತ್ತಿದ್ದಾರೆ'ಎಂದು ವಿವರಿಸಿದರು.

ADVERTISEMENT

‘ನಿಮ್ಮ ವಯಸ್ಸು, ನಿಮ್ಮ ಉಪಾಧ್ಯಕ್ಷರ ಆಯ್ಕೆಯನ್ನು ಮುಖ್ಯವಾಗಿಸುತ್ತದೆ. ಈ ಸಂದರ್ಭದಲ್ಲಿ ಸೆನೆಟರ್ ಕಮಲಾ ಅವರು ಉಪಾಧ್ಯಕ್ಷೆಯಾಗಬೇಕೆಂದು ಏಕೆ ಬಯಸಿದ್ದೀರಿ‘ ಎಂಬ ಪ್ರಶ್ನೆಗೆ ಜೊ ಬೈಡೆನ್, ‘ಕಮಲಾ ಅವರು ಸ್ಯಾನ್‌ಫ್ರಾನ್ಸಿಸ್ಕೊದ ಜಿಲ್ಲಾ ವಕೀಲರಾಗಿದ್ದರು. ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದ ಮೊದಲ ಮಹಿಳೆ ಕೂಡ. ಈಗ ಉಪಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನಗೊಂಡಿರುವ ಮೊದಲ ಕಪ್ಪು ಮಹಿಳೆ. ಅಮೆರಿಕದ ಸೆನೆಟ್‌ನಲ್ಲಿ ಸೇವೆ ಸಲ್ಲಿಸಿದ ಎರಡನೇ ಕಪ್ಪು ಮಹಿಳೆ. ಇವರು ಉಪಾಧ್ಯಕ್ಷೆಯಾಗಿ ಆಯ್ಕೆಯಾದರೆ, ದೇಶದಲ್ಲಿ ಅನೇಕ ಬದಲಾವಣೆಗಳನ್ನು ತರಬಹುದು‘ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.