ADVERTISEMENT

ಯುಎಇಯಲ್ಲಿ ‘ಕನ್ನಡ ಪಾಠಶಾಲೆ’

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 11:27 IST
Last Updated 2 ಅಕ್ಟೋಬರ್ 2020, 11:27 IST
‘ಕನ್ನಡ ಪಾಠಶಾಲೆ’ ಮೂಲಕ ಕನ್ನಡ ಭಾಷೆಯನ್ನು ಕಲಿತ ಮಕ್ಕಳು
‘ಕನ್ನಡ ಪಾಠಶಾಲೆ’ ಮೂಲಕ ಕನ್ನಡ ಭಾಷೆಯನ್ನು ಕಲಿತ ಮಕ್ಕಳು   

ಬೆಂಗಳೂರು: ಅರಬ್‌ ಸಂಯುಕ್ತ ರಾಷ್ಟ್ರಗಳಲ್ಲಿ (ಯುಎಇ) ಹಲವು ವರ್ಷಗಳಿಂದ ಕನ್ನಡದ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ‘ಕನ್ನಡ ಮಿತ್ರರು’ ಸಂಘಟನೆಯು ಈ ಬಾರಿ ಆನ್‌ಲೈನ್‌ ಮೂಲಕ ಕನ್ನಡ ಕಲಿಸುವ ಕಾರ್ಯ ನಡೆಸಲಿದೆ.

ಕನ್ನಡ ಮಿತ್ರರು ಸಂಘಟನೆಯವರು 2014ರಲ್ಲಿ ‘ಕನ್ನಡ ಪಾಠಶಾಲೆ’ ಎಂಬ ಕನ್ನಡ ಕಲಿಕಾ ವೇದಿಕೆಯನ್ನು ಆರಂಭಿಸಿ, ದುಬೈಯಲ್ಲಿರುವ ಆಸಕ್ತ ಭಾರತೀಯರಿಗೆ ಉಚಿತವಾಗಿ ಕನ್ನಡವನ್ನು ಕಲಿಸುತ್ತಿದ್ದಾರೆ.

‘ವಿದೇಶಿ ನೆಲದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಕಲೆಯನ್ನು ಉತ್ತೇಜಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕನ್ನಡವನ್ನು ಕ್ರಮಬದ್ಧವಾಗಿ ಕಲಿಸುವ, ಜಗತ್ತಿನ ಅತಿ ದೊಡ್ಡ ವಿದೇಶಿ ಕನ್ನಡ ಕಲಿಕಾ ಕೇಂದ್ರ ನಮ್ಮದು’ ಎಂದು ಯುಎಇ ‘ಕನ್ನಡ ಮಿತ್ರ’ ಸಂಘಟನೆಯ ಅಧ್ಯಕ್ಷ ಶಶಿಧರ್‌ ನಾಗರಾಜಪ್ಪ ಹೇಳಿದ್ದಾರೆ.

ADVERTISEMENT

‘ಕಳೆದ ಶೈಕ್ಷಣಿಕ ವರ್ಷದಲ್ಲಿ 210 ಮಕ್ಕಳಿಗೆ ಕನ್ನಡ ಬೋಧನೆ ಮಾಡಲಾಗಿದೆ. ಮುಂದಿನ ತರಗತಿಗಳನ್ನು ಆನ್‌ಲೈನ್‌ ಮೂಲಕ ನಡೆಸಬೇಕಾಗಿದೆ. ನವೆಂಬರ್‌ 6ರಿಂದ ಪ್ರಸಕ್ತ ಸಾಲಿನ ತರಗತಿಗಳು ಆರಂಭವಾಗಲಿವೆ. ಆರು ತಿಂಗಳ ಕಾಲ ಪ್ರತಿ ಶುಕ್ರವಾರ ತರಗತಿಗಳನ್ನು ನಡೆಸಲಾಗುವುದು. ಈಗಾಗಲೇ ತರಗತಿಗಳಿಗೆ ಹಾಜರಾಗಿ ಹೆಚ್ಚಿನ ಶಿಕ್ಷಣ ಪಡೆಯಲು ಇಚ್ಛಿಸುವವರಿಗೆ ಆದ್ಯತೆ ನೀಡಲಾಗುವುದು. ಈ ಕಲಿಕೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸಂಘಟನೆಯ ಉಪಾಧ್ಯಕ್ಷ ಸಿದ್ದಲಿಂಗೇಶ್ ರೇವಪ್ಪ ತಿಳಿಸಿದ್ದಾರೆ.

ಯುಎಇಯಲ್ಲಿರುವ, 6ರಿಂದ 16 ವರ್ಷ ವಯಸ್ಸಿನೊಳಗಿನವರು http://registration.kannadashaale.com/signup.php ಮೂಲಕ ಹೆಸರು ನೋಂದಾಯಿಸಬಹುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.