ADVERTISEMENT

ವಿಯೆಟ್ನಾಂನಲ್ಲಿ ಕನ್ನಡದ ‘ಕಾಲ’!: ಮಿಸಾನ್‌ ಸ್ಮಾರಕಗಳ ನಡುವೆ ಕನ್ನಡ ಲಿಪಿ ಪತ್ತೆ

ಸಾಗರೋತ್ತರ ಸಂಬಂಧಕ್ಕೆ ಹೊಸ ಅಧ್ಯಾಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 19:51 IST
Last Updated 14 ನವೆಂಬರ್ 2018, 19:51 IST
ಮಿಸಾನ್‌ ದೇವಾಲಯದ ಸಂಕೀರ್ಣದ ನೋಟ. ಕನ್ನಡ ಲಿಪಿ ಈ ಪರಿಸರದಲ್ಲಿ ಪತ್ತೆಯಾಗಿದೆ
ಮಿಸಾನ್‌ ದೇವಾಲಯದ ಸಂಕೀರ್ಣದ ನೋಟ. ಕನ್ನಡ ಲಿಪಿ ಈ ಪರಿಸರದಲ್ಲಿ ಪತ್ತೆಯಾಗಿದೆ   

ಬೆಂಗಳೂರು: ಕರ್ನಾಟಕದಿಂದ ಸಾವಿರಾರು ಕಿಲೋ ಮೀಟರ್‌ ದೂರದಲ್ಲಿರುವ ವಿಯೆಟ್ನಾಂಗೂ ಕನ್ನಡಕ್ಕೂ ಏನು ಸಂಬಂಧ?

ಸಣ್ಣ–ಪುಟ್ಟದ್ದಲ್ಲ, ಚಾರಿತ್ರಿಕವಾದ ಗಟ್ಟಿ ಸಂಬಂಧವೇ ಇದೆ ಎನ್ನುತ್ತದೆ ಅಲ್ಲಿನ ದನಾಂಗ್‌ ಪ್ರಾಂತ್ಯಕ್ಕೆ ಸೇರಿದ ಸಂರಕ್ಷಿತ ಸ್ಮಾರಕಗಳ ತಾಣ ಮಿಸಾನ್‌ನಿಂದ ಬಂದಿರುವ ತಾಜಾ ವರ್ತಮಾನ. ಹೌದು, ಮಿಸಾನ್‌ ಸ್ಮಾರಕಗಳ ನಡುವೆ ಕನ್ನಡ ಲಿಪಿ ಪತ್ತೆಯಾಗಿದ್ದು, ಐತಿಹಾಸಿಕ ಸಂಬಂಧದ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ.

ವಿಯೆಟ್ನಾಂ ದೇಶದಲ್ಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿರುವ, ಅಲ್ಲಿನ ಭಾರತೀಯ ಸಾಂಸ್ಕೃತಿಕ ರಾಯಭಾರಿ ಜಿ.ಬಿ. ಹರೀಶ್‌ ಹಾಗೂ ಅವರ ಪತ್ನಿ ಎಂ.ಆರ್‌. ಗಿರಿಜಾ, ಮಿಸಾನ್‌ ಸ್ಮಾರಕಗಳ ಭಗ್ನಾವಶೇಷಗಳ ಮಧ್ಯೆ ಈ ಕನ್ನಡ ಲಿಪಿಯನ್ನು ಪತ್ತೆ ಮಾಡಿದ್ದಾರೆ.

ADVERTISEMENT

‘ಈ ಪ್ರದೇಶದಲ್ಲಿ ಕ್ರಿ.ಶ. 2–3ನೇ ಶತಮಾನದಲ್ಲಿ ಭಾರತೀಯ ಸಂಸ್ಕೃತಿಯ ಪ್ರಭಾವ ದಟ್ಟವಾಗಿದ್ದು, ವಿಶೇಷವಾಗಿ ಪಲ್ಲವರ ಹೆಜ್ಜೆ ಗುರುತುಗಳು ಕಂಡುಬರುತ್ತವೆ ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದರು. ಅದರ ಜಾಡು ಹಿಡಿದು ನಾನು ಅಲ್ಲಿಗೆ ಹೋಗಿದ್ದೆ’ ಎಂದು ಹೇಳುತ್ತಾರೆ ಹರೀಶ್‌.

‘ಒಂದು ಭಗ್ನಾವಶೇಷದ ಮೇಲೆ ‘ಚಾಮ್‌’ ಲಿಪಿಯಿದೆ. ಅದರ ಮಧ್ಯೆ ‘ಕಾಲ’ ಎಂಬ ಕನ್ನಡ ಪದವಿದೆ. ಅದು ಕದಂಬರ ಕಾಲದ ಬರಹ. ಇದರಿಂದ ಕನ್ನಡಿಗರ ಸಾಗರೋತ್ತರ ಸಂಪರ್ಕ ಕುರಿತು ಹೊಸ ಆಯಾಮವೊಂದು ತೆರೆದುಕೊಂಡಿದೆ’ ಎಂದು ಅವರು ವಿವರಿಸುತ್ತಾರೆ. ‘ಆಸಕ್ತರು ಈ ಸಂಬಂಧ ಹೆಚ್ಚಿನ ಸಂಶೋಧನೆ ನಡೆಸಬಹುದು’ ಎನ್ನುತ್ತಾರೆ.

ಈ ಕುರಿತು ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ, ‘ಕನ್ನಡದ ಸಂಪರ್ಕ ಅಷ್ಟು ದೂರದವರೆಗೆ ಹರಡಿರುವ ಸಾಧ್ಯತೆ ಇದೆ. ಆದರೆ, ಅಲ್ಲಿ ದೊರೆತಿರುವ ಅವಶೇಷವನ್ನು ನೋಡದೇ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸುತ್ತಾರೆ.

ಮಿಸಾನ್‌ ಕುರಿತು...

ಇಂಡೋ–ಚೀನಾ ಪ್ರದೇಶದ ಪ್ರಮುಖ ಪುರಾತತ್ವ ತಾಣಗಳಲ್ಲಿ ಮಿಸಾನ್‌ ಕೂಡ ಒಂದು. ವಿಯೆಟ್ನಾಂ ಸಮರದ ಸಂದರ್ಭದಲ್ಲಿ ಅಮೆರಿಕ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಇಲ್ಲಿನ ಹಲವು ಸ್ಮಾರಕಗಳು ಧ್ವಂಸಗೊಂಡಿದ್ದವು.

ಮಧ್ಯ ಕರಾವಳಿ ಪ್ರಾಂತ್ಯದಲ್ಲಿರುವ ಈ ಊರಿನಲ್ಲಿ ಪುರಾತನವಾದ ಹಲವು ಹಿಂದೂ–ಬೌದ್ಧ ದೇವಾಲಯಗಳಿವೆ. 70ಕ್ಕೂ ಹೆಚ್ಚು (ಪೂಜೆಗೊಳ್ಳದ) ಶಿವಾಲಯಗಳಿವೆ. ಅದರಲ್ಲಿ ಭದ್ರೇಶ್ವರ ದೇವಾಲಯ ಪ್ರಮುಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.