ADVERTISEMENT

ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಜಿಯಾಗೆ ಭಾವಪೂರ್ಣ ವಿದಾಯ

ಸಂಸತ್‌ ಆವರಣದಲ್ಲಿ ಅಂತ್ಯಕ್ರಿಯೆ * ಬಿಗಿ ಭದ್ರತೆ, ಅಭಿಮಾನಿಗಳಿಂದ ಶ್ರದ್ಧಾಂಜಲಿ

ಪಿಟಿಐ
Published 31 ಡಿಸೆಂಬರ್ 2025, 14:09 IST
Last Updated 31 ಡಿಸೆಂಬರ್ 2025, 14:09 IST
<div class="paragraphs"><p>ಢಾಕಾದಲ್ಲಿ ನಡೆದ ಮಾಜಿ ಪ್ರಧಾನಿ ಖಾಲಿದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಶೋಕ ಸಂದೇಶವಿರುವ ಪತ್ರವನ್ನು ಜಿಯಾ ಅವರ ಪುತ್ರ ತಾರಿಕ್‌ ರೆಹಮಾನ್‌ ಅವರಿಗೆ ಬುಧವಾರ ಹಸ್ತಾಂತರಿಸಿದರು&nbsp; </p></div>

ಢಾಕಾದಲ್ಲಿ ನಡೆದ ಮಾಜಿ ಪ್ರಧಾನಿ ಖಾಲಿದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಶೋಕ ಸಂದೇಶವಿರುವ ಪತ್ರವನ್ನು ಜಿಯಾ ಅವರ ಪುತ್ರ ತಾರಿಕ್‌ ರೆಹಮಾನ್‌ ಅವರಿಗೆ ಬುಧವಾರ ಹಸ್ತಾಂತರಿಸಿದರು 

   

ಪಿಟಿಐ ಚಿತ್ರ 

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಬಿಎನ್‌ಪಿ ಪಕ್ಷದ ಹಿರಿಯ ನಾಯಕಿಯಾಗಿದ್ದ ಖಾಲಿದಾ ಜಿಯಾ ಅವರ ಅಂತ್ಯಕ್ರಿಯೆ ಇಲ್ಲಿನ ಸಂಸತ್‌ ಕಟ್ಟಡದ ಆವರಣದಲ್ಲಿ ಬುಧವಾರ ನೆರವೇರಿತು.

ADVERTISEMENT

ದೀರ್ಘಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಜಿಯಾ, ಮಂಗಳವಾರ ನಿಧನರಾಗಿದ್ದರು. 

ಜಿಯಾ ಅವರ ಪಾರ್ಥಿವ ಶರೀರವಿದ್ದ ಪೆಟ್ಟಿಗೆಗೆ ರಾಷ್ಟ್ರ ಧ್ವಜ ಹೊದಿಸಲಾಗಿತ್ತು. ಅವರ ನಿವಾಸದಿಂದ ಅಂತ್ಯಕ್ರಿಯೆ ನಡೆದ ಸ್ಥಳದವರೆಗೆ ಮೆರವಣಿಗೆ ಮೂಲಕ ಅವರ ಪಾರ್ಥಿವ ಶರೀರವನ್ನು ತರಲಾಯಿತು. 

ಅಂತ್ಯಕ್ರಿಯೆ ನಡೆದ ಸ್ಥಳದ ಬಳಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕಿಯ ಅಂತಿಮ ದರ್ಶನ ಪಡೆದು, ಭಾವಪೂರ್ಣ ವಿದಾಯ ಹೇಳಿದರು. ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಭಾರಿ ಬಂದೋಬಸ್ತ್ ಹಾಕಲಾಗಿತ್ತು.

ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ(ಬಿಎನ್‌ಪಿ) ಬೆಂಬಲಿಗರು ಜಿಯಾ ಅವರ ಭಾವಚಿತ್ರವಿರುವ ಬಾವುಟಗಳನ್ನು ಹಿಡಿದಿದ್ದರು.

ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜುಬಯೇರ್ ರೆಹಮಾನ್‌ ಚೌಧರಿ, ಬಿಎನ್‌ಪಿ ಹಂಗಾಮಿ ಅಧ್ಯಕ್ಷರೂ ಆದ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಹಾಗೂ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಬೈತುಲ್‌ ಮೊಕರ್ರಂ ರಾಷ್ಟ್ರೀಯ ಮಸೀದಿಯ ಮುಖ್ಯ ಧರ್ಮ ಗುರು ಮೊಹಮ್ಮದ್ ಅಬ್ದುಲ್ ಕಾದರ್ ಅವರು ವಿಧಿ–ವಿಧಾನಗಳನ್ನು ನಡೆಸಿಕೊಟ್ಟರು.

ಶ್ರದ್ಧಾಂಜಲಿ: ರೆಹಮಾನ್‌ಗೆ ಮೋದಿ ಪತ್ರ ಹಸ್ತಾಂತರಿಸಿದ ಜೈಶಂಕರ್

ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಖಾಲಿದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಬಾಂಗ್ಲಾದೇಶದ ಮಾಜಿ ಪ್ರಧಾನಿಗೆ ಅಂತಿಮ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಢಾಕಾಕ್ಕೆ ಬಂದಿಳಿದ ಕೂಡಲೇ ಜಿಯಾ ಅವರ ಪುತ್ರ ಹಾಗೂ ಬಿಎನ್‌ಪಿ ಹಂಗಾಮಿ ಅಧ್ಯಕ್ಷ ತಾರಿಕ್‌ ರೆಹಮಾನ್‌ ಅವರನ್ನು ಜೈಶಂಕರ್‌ ಭೇಟಿ ಮಾಡಿದರು. ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬರೆದ ಪತ್ರವನ್ನು ರೆಹಮಾನ್‌ ಅವರಿಗೆ ಹಸ್ತಾಂತರಿಸಿದರು. ‘ಪ್ರಧಾನಿ ಮೋದಿಯವರ ಪತ್ರ ಹಸ್ತಾಂತರಿಸುವ ಜೊತೆಗೆ ಭಾರತದ ಜನತೆ ಹಾಗೂ ಸರ್ಕಾರದ ಪರವಾಗಿ ಸಂತಾಪ ಸೂಚಿಸಲಾಯಿತು’ ಎಂದು ಜೈಶಂಕರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.