ADVERTISEMENT

ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಸ್ಥಿತಿ ಗಂಭೀರ: ಬ್ರಿಟಿನ್ ವೈದ್ಯರಿಂದ ಚಿಕಿತ್ಸೆ

ಪಿಟಿಐ
Published 2 ಡಿಸೆಂಬರ್ 2025, 14:03 IST
Last Updated 2 ಡಿಸೆಂಬರ್ 2025, 14:03 IST
ಖಲೀದಾ ಜಿಯಾ
ಖಲೀದಾ ಜಿಯಾ   

ಢಾಕಾ: ಬ್ರಿಟನ್‌ನ ತಜ್ಞವೈದ್ಯರ ತಂಡವೊಂದು ಢಾಕಾಕ್ಕೆ ಭೇಟಿ ನೀಡಲಿದ್ದು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರಿಗೆ ನೀಡುತ್ತಿರುವ ಚಿಕಿತ್ಸೆಯ ಮೌಲ್ಯಮಾಪನ ನಡೆಸಿದೆ. 

ಜಿಯಾ ಅವರು ಚಿಕಿತ್ಸೆ ಪಡೆಯುತ್ತಿರುವ ಎವರ್‌ಕೇರ್‌ ಹಾಸ್ಪಿಟಲ್‌ನ ವೈದ್ಯ, ಜಹೀದ್‌ ಹುಸೈನ್‌ ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿದ್ದಾರೆ. 

‘ಈಗಾಗಲೇ ಅಂತರರಾಷ್ಟ್ರೀಯ ವೈದ್ಯಕೀಯ ಮಂಡಳಿಯ ತಜ್ಞರು ಜಿಯಾ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಚೀನಾದ ಐವರು ವೈದ್ಯರ ತಂಡ ಸೋಮವಾರವೇ ಆಗಮಿಸಿ, ಈ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಬ್ರಿಟನ್‌ನ ತಜ್ಞ ವೈದ್ಯರ ತಂಡವೂ ಚಿಕಿತ್ಸೆ ಕುರಿತು ಪರಿಶೀಲಿಸಲಿದೆ‘ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ಅಲ್ಲದೇ, ಭಾರತ, ಚೀನಾ, ಅಮೆರಿಕ, ಕತಾರ್‌, ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನ ಕೂಡ ವೈದ್ಯಕೀಯ ನೆರವು ನೀಡುವುದಾಗಿ ಹೇಳಿವೆ ಎಂದು ತಿಳಿಸಿದ್ದಾರೆ.

ಜಿಯಾ ಅವರು ಸದ್ಯಕ್ಕೆ ಇರುವಂಥ ಪರಿಸ್ಥಿತಿಯಲ್ಲಿ ಅವರನ್ನು ವಿದೇಶಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸುವುದು ಸೂಕ್ತವಲ್ಲದ ಕಾರಣ ಇಲ್ಲಿಯೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.   

ಏತನ್ಮಧ್ಯೆ, ಜಿಯಾ ಅವರು ಚಿಕಿತ್ಸೆ ಪಡೆಯುತ್ತಿರುವ ಎವರ್‌ಕೇರ್‌ ಆಸ್ಪತ್ರೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅವರು ಇರುವ ಸುತ್ತ ಮುತ್ತಲಿನ ವಾರ್ಡ್‌ಗಳನ್ನು ಖಾಲಿ ಮಾಡಿಸಲಾಗಿದೆ. ಆಸ್ಪತ್ರೆಗೆ ಬರುವ–ಹೋಗುವ ರೋಗಿಗಳ ಮೇಲೂ ಕಣ್ಗಾವಲು ಇರಿಸಲಾಗಿದ್ದು, ಆಸ್ಪತ್ರೆಯ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿ, 24ಕ್ಕೂ ಅಧಿಕ ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.