ADVERTISEMENT

ಪಾಕಿಸ್ತಾನ ಮೂಲದ ಸಾದಿಕ್ ಖಾನ್ 3ನೇ ಬಾರಿಗೆ ಲಂಡನ್‌ ಮೇಯರ್ ಆಗಿ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮೇ 2024, 2:50 IST
Last Updated 5 ಮೇ 2024, 2:50 IST
<div class="paragraphs"><p>ಎಎನ್‌ಐ ಸ್ಕ್ರೀನ್‌ಗ್ರ್ಯಾಬ್</p></div>

ಎಎನ್‌ಐ ಸ್ಕ್ರೀನ್‌ಗ್ರ್ಯಾಬ್

   

ಲಂಡನ್: ಪಾಕಿಸ್ತಾನ ಮೂಲದ ಲೇಬರ್ ಪಕ್ಷದ ಸಾದಿಕ್ ಖಾನ್ ಅವರು 3ನೇ ಬಾರಿಗೆ ಇಂಗ್ಲೆಂಡ್ ರಾಜಧಾನಿ ಲಂಡನ್‌ನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್‌ನಾದ್ಯಂತ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಲೇಬರ್ ಪಕ್ಷ ರಾಜಕೀಯ ಪ್ರಾಬಲ್ಯವನ್ನು ಸಾಧಿಸಿದ್ದು, ಕನ್ಸರ್ವೇಟಿವ್ ಪಕ್ಷ ಹಿನ್ನಡೆ ಕಂಡಿದೆ.

ADVERTISEMENT

ಸಾದಿಕ್ ಖಾನ್ ಶೇ 43.7ರಷ್ಟು ಮತಗಳನ್ನು ಪಡೆದು, ಕನ್ಸರ್ವೇಟಿವ್ ಪಕ್ಷದ ಸೂಸನ್ ಹಾಲ್ ಅವರನ್ನು ಸುಮಾರು ಶೇ 11ರಷ್ಟು ಮತಗಳ ಅಂತರದಿಂದ ಸೋಲಿಸಿದರು.

ಈ ಮೂಲಕ 2016ರಿಂದ 3ನೇ ಬಾರಿಗೆ ಲಂಡನ್ ಮೇಯರ್ ಆಗಿ ಸಾದಿಕ್ ಆಯ್ಕೆಯಾಗಿದ್ದಾರೆ.

ಈ ಕುರಿತಂತೆ ಲಂಡನ್ ಜನತೆಗೆ ಧನ್ಯವಾದ ಹೇಳಿರುವ ಸಾದಿಕ್, ನಾನು ತುಂಬಾ ಪ್ರೀತಿಸುವ ನಗರದ ಸೇವೆ ಮಾಡಲು ಮತ್ತೊಂದು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಈ ಜಯವು ಇತಿಹಾಸ ಮಾತ್ರವಲ್ಲದೆ, ನಮ್ಮ ಭಿವಿಷ್ಯದ ನಿರೂಪಣೆಯಾಗಿದೆ. ಪ್ರತಿಯೊಬ್ಬ ಲಂಡನ್‌ ನಿವಾಸಿಗಾಗಿ ಹಸಿರು, ಸುರಕ್ಷಿತ ನಗರ ನಿರ್ಮಾಣಕ್ಕಾಗಿ ಅವಿರತ ಶ್ರಮಿಸುವುದಾಗಿ ಹೇಳಿದ್ದಾರೆ.

ಸಾದಿಕ್ ಅವರ ಜಯವು ಇಂಗ್ಲೆಂಡ್‌ನಾದ್ಯಂತ ಲೇಬರ್ ಪಕ್ಷದ ಜಯದ ಮುಂದುವರಿದ ಭಾಗವಾಗಿದೆ.

10 ಸ್ಥಳೀಯ ಸಂಸ್ಥೆಗಳ ಮೇಲೆ ಆಡಳಿತಾರೂಢ, ಪ್ರಧಾನಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಹಿಡಿತ ಕಳೆದುಕೊಂಡಿದ್ದು, ಭಾರಿ ಮುಖಭಂಗ ಅನುಭವಿಸಿದೆ. ಸುಮಾರು 500 ಕೌನ್ಸಿಲರ್‌ಗಳು ಸೋಲು ಅನುಭವಿಸಿದ್ದಾರೆ.

ಇದು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸುನಕ್ ಅವರಿಗೆ ಭಾರೀ ಹಿನ್ನಡೆಯಾಗಲಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.