ADVERTISEMENT

ತಿದ್ದುಪಡಿಗೆ ವಿರೋಧ: ಪಾಕ್‌ ವಕೀಲರಿಂದ ಮುಷ್ಕರ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 15:10 IST
Last Updated 16 ನವೆಂಬರ್ 2025, 15:10 IST
<div class="paragraphs"><p>ಪಾಕ್‌</p></div>

ಪಾಕ್‌

   

ಲಾಹೋರ್‌: ಪಾಕಿಸ್ತಾನ ಸಂವಿಧಾನದ 27ನೇ ತಿದ್ದುಪಡಿಯನ್ನು ವಿರೋಧಿಸಿ ಇಲ್ಲಿನ ವಕೀಲರು ಮುಷ್ಕರ ನಡೆಸುವುದಾಗಿ ಭಾನುವಾರ ಘೋಷಿಸಿದ್ದಾರೆ.

ಈ ತಿದ್ದುಪಡಿಯು ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ಮೊಟಕುಗೊಳಿಸುತ್ತದೆ ಎಂದು ಆರೋಪಿಸಿರುವ ಅವರು, ಸೋಮವಾರ ಲಾಹೋರ್‌ನಾದ್ಯಂತ ಯಾವ  ನ್ಯಾಯಾಲಯಗಳಲ್ಲೂ ಕಲಾಪ ನಡೆಸದಿರಲು ನಿರ್ಧರಿಸಿದ್ದಾರೆ.

ADVERTISEMENT

ರಕ್ಷಣಾ ಪಡೆಗಳಿಗೆ ಮುಖ್ಯಸ್ಥರಾಗಿ ಒಂದು ಹೊಸ ಹುದ್ದೆಯನ್ನು ರಚಿಸಲು ಹಾಗೂ ಸಂವಿಧಾನಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗೆ ಪ್ರತ್ಯೇಕ ಸಾಂವಿಧಾನಿಕ ನ್ಯಾಯಾಲಯವನ್ನು ರಚಿಸುವ ಉದ್ದೇಶದಿಂದ 27ನೇ ತಿದ್ದಪಡಿ ಮಾಡಲಾಗಿದೆ. ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರು ಈ ಪ್ರಸ್ತಾವಕ್ಕೆ ಗುರುವಾರವೇ ಅನುಮೋದನೆಯನ್ನೂ ನೀಡಿದ್ದಾರೆ.

ಈ ತಿದ್ದುಪಡಿಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಾದ ಸಯ್ಯದ್‌ ಮನ್ಸೂರ್‌ ಅಲಿ ಶಾ, ನ್ಯಾ. ಅಥರ್‌ ಮಿನಾಲಹ್‌ ಹಾಗೂ ಲಾಹೋರ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಶಾಮ್ಸ್‌ ಮೆಹಮೂದ್‌ ಮಿರ್ಜಾ ಅವರು ರಾಜೀನಾಮೆ ನೀಡಿದ್ದರು. ಜತೆಗೆ ಈ ತಿದ್ದುಪಡಿಯ ಮೂಲಕ ಸಂವಿಧಾನ ಹಾಗೂ ನ್ಯಾಯಾಂಗದ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದೂ ದೂರಿದ್ದರು. 

ನ್ಯಾಯಮೂರ್ತಿಗಳ ನಡೆಯನ್ನು ಲಾಹೋರ್‌ ಹೈಕೋರ್ಟ್‌ ಬಾರ್‌ ಅಸೋಸಿಯೇಷನ್‌ (ಎಲ್‌ಎಚ್‌ಸಿಬಿಎ) ಪ್ರಶಂಸಿಸಿ, ತಿದ್ದುಪಡಿ ವಿರುದ್ಧದ ಹೋರಾಟಕ್ಕೆ ತನ್ನ ಬೆಂಬಲ ಘೋಷಿಸಿದೆ. ಅಲ್ಲದೇ, ಇತರೆ ನ್ಯಾಯಮೂರ್ತಿಗಳು ಕೂಡ ಈ ತಿದ್ದುಪಡಿಯನ್ನು ವಿರೋಧಿಸುವ ನಿಟ್ಟಿನಲ್ಲಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಬೇಕು,  ಸೋಮವಾರ ಕಲಾಪ ನಡೆಸಬಾರದು ಎಂದೂ ಎಲ್‌ಎಚ್‌ಸಿಬಿಎ ಆಗ್ರಹಿಸಿದೆ. 

ವಿರೋಧಕ್ಕೆ ಕಾರಣವೇನು?: 27ನೇ ತಿದ್ದುಪಡಿಯು ಸಂವಿಧಾನಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ (ಫೆಡರಲ್‌ ಕಾನ್‌ಸ್ಟಿಟ್ಯೂಷನಲ್ ಕೋರ್ಟ್– ಎಫ್‌ಸಿಸಿ) ರಚಿಸಲು ಅನುಮೋದಿಸುತ್ತದೆ. ಇದರಿಂದ ದೇಶದ ಸರ್ವೋಚ್ಛ ನ್ಯಾಯಾಂಗ ಸಂಸ್ಥೆಯಾಗಿರುವ ಸುಪ್ರೀಂ ಕೋರ್ಟ್‌ನ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಅದು ಬರೀ ಸಿವಿಲ್‌ ಹಾಗೂ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಗೆ ಮೀಸಲಾಗುತ್ತದೆ ಎಂದು ನ್ಯಾಯಮೂರ್ತಿಗಳು, ವಕೀಲರು ಕಳವಳ ವ್ಯಕ್ತಪಡಿಸಿದ್ದಾರೆ. 

ಅಲ್ಲದೇ, ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸುವ ಹಕ್ಕನ್ನು ಕೂಡ ಪ್ರತ್ಯೇಕ ನ್ಯಾಯಾಲಯಕ್ಕೆ ನೀಡಲಾಗುತ್ತದೆ. ಈ ಮೂಲಕ ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ಕುಂದಿಸಿದಂತಾಗುತ್ತದೆ ಎಂದೂ ಆರೋಪಿಸಲಾಗಿದೆ. ಈ ಕಾರಣಕ್ಕಾಗಿಯೇ ತಿದ್ದುಪಡಿಯನ್ನು ವಿರೋಧಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.