ADVERTISEMENT

ಅರಣ್ಯ ಅತಿಕ್ರಮ ಪ್ರವೇಶ ನಿಷಿದ್ಧ ಎನ್ನುವುದು ಇದಕ್ಕೇ ನೋಡಿ...!

ಏಜೆನ್ಸೀಸ್
Published 8 ಏಪ್ರಿಲ್ 2019, 17:14 IST
Last Updated 8 ಏಪ್ರಿಲ್ 2019, 17:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕ್ರುಗರ್‌(ದಕ್ಷಿಣ ಆಫ್ರಿಕಾ): ಘೇಂಡಾಮೃಗವನ್ನು ಭೇಟಿಯಾಡುವ ಉತ್ಸಾಹದಲ್ಲಿ ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದವ ಆನೆ ತುಳಿತಕ್ಕೆ ಸತ್ತು, ಕೊನೆಗೆ ಸಿಂಹಗಳಿಗೆ ಆಹಾರವಾದ ಕತೆ ಇದು.

ಈ ಘಟನೆ ನಡೆದಿರುವುದು ದಕ್ಷಿಣ ಆಫ್ರಿಕಾದ ಬೃಹತ್‌ ವನ್ಯಧಾಮ ಎನಿಸಿಕೊಂಡಿರುವ ‘ಕ್ರುಗರ್‌‘ನಲ್ಲಿ. ಬೇಟೆಗೆ ಹೋದ ವ್ಯಕ್ತಿ ಮಂಗಳವಾರವೇ ಸಾವಿಗೀಡಾಗಿದ್ದನಾದರೂ ಆತ ಪತ್ತೆಯಾಗಿದ್ದು ಮಾತ್ರ ಎರಡು ದಿನಗಳ ನಂತರ. ಅದೂ ಅಸ್ತಿಪಂಜರವಾಗಿ.‌

ಘೇಂಡಾಮೃಗ ಬೇಟೆ ಎಂಬುದು ಜಗತಿಕ ಸಮಸ್ಯೆ. ಎಲ್ಲ ವನ್ಯಧಾಮಗಳಲ್ಲೂ ಅವುಗಳ ಬೇಟೆಗಾರರಿದ್ದಾರೆ. ಜಗತ್ತಿನಲ್ಲಿ ನಿತ್ಯವೂ ಮೂರಕ್ಕಿಂತಲೂ ಹೆಚ್ಚು ಆಫ್ರಿಕಾ ಘೇಂಡಾಮೃಗಗಳು ಬೇಟೆಗಾರರಿಗೆ ಬಲಿಯಾಗುತ್ತಿವೆ ಎನ್ನುತ್ತವೆ ಅಂಕಿ ಅಂಶಗಳು. ನಿತ್ಯ ಬಲಿಯಾಗುವ ಘೇಂಡಾಮೃಗಗಳ ಸಾಲಿಗೆ ಮಂಗಳವಾರವೂ ಒಂದು ಅಮಾಯಕ ಜೀವ ಸೇರಿಕೊಳ್ಳುತ್ತಿತ್ತೋ ಏನೋ ಗೊತ್ತಿಲ್ಲ. ಆದರೆ, ಅಷ್ಟರಲ್ಲಾಗಲೇ ಅಲ್ಲಿ ಬೇರೆಯದ್ದೇ ಆಟ ನಡೆದಿತ್ತು.

ADVERTISEMENT

ನಾಲ್ವರು ಕಳ್ಳಬೇಟೆಗಾರರ ಗುಂಪೊಂದು ಮಂಗಳವಾರ ಕೃಗರ್‌ ವನ್ಯಧಾಮವನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆ. ಇನ್ನೇನು ಘೇಂಡಾಮೃಗವೊಂದನ್ನು ಬೇಟೆಯಾಡಬೇಕು ಎನ್ನುವಷ್ಟರಲ್ಲಿ ದಿಢೀರನೆ ಆನೆಯೊಂದು ದಾಳಿ ನಡೆಸಿದೆ. ನೋಡ ನೋಡುತ್ತಲೇ ಒಬ್ಬನನ್ನು ಹೊಸಕಿಹಾಕಿದೆ. ಆನೆ ಅತ್ತ ಹೋದ ಮೇಲೆ ಉಳಿದ ಮೂವರು ಮೃತನ ದೇಹವನ್ನು ರಸ್ತೆ ವರೆಗೆ ಹೊತ್ತು ತಂದಿದ್ದಾರೆ. ಮೃತನ ಕುಟುಂಬಕ್ಕೆ ಮಾಹಿತಿಯನ್ನೂ ನೀಡಿದ್ದಾರೆ.

ಇದೇ ಹಿನ್ನೆಲೆಯಲ್ಲಿ ಅಲ್ಲಿನ ಅರಣ್ಯ ಇಲಾಖೆ ಪೊಲೀಸರು ಮೃತನ ದೇಹಕ್ಕಾಗಿ ಮತ್ತು ಉಳಿದ ಮೂವರಿಗಾಗಿ ಶೋಧ ಆರಂಭಿಸಿದ್ದಾರೆ. ಮಂಗಳವಾರ ರಾತ್ರಿ ವರೆಗೆ ಶೋಧ ನಡೆಸಲಾಯಿತಾದರೂ, ಅವರಿಗೆ ಏನೂ ಸಿಗಲಿಲ್ಲ.

ಮರುದಿನ ಹೆಲಿಕಾಪ್ಟರ್‌ ಬಳಸಿ ಅರಣ್ಯದಲ್ಲಿ ಪರಿಶೀಲನೆ ನಡೆಸಲಾಯಿತಾದರೂ, ಮೃತ ದೇಹ ಸಿಕ್ಕಿರಲಿಲ್ಲ. ಈ ನಡುವೆ ಉಳಿದ ಮೂವರು ಬೇಟೆಗಾರರು ಪೊಲೀಸರಿಗೆ ಸೆರೆ ಸಿಕ್ಕಿದ್ದರು. ಅವರಿಂದ ಎರಡು ಬಂದೂಕುಗಳು, ಮದ್ದು ಗುಂಡುಗಳೂ ಸಿಕ್ಕಿದ್ದವು. ಈ ಮೂವರಿಂದ ಅಂದಿನ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಾಯಿತು.

ಹೀಗಿರುವಾಗಲೇ ಮೃತ ವ್ಯಕ್ತಿಯ ದೇಹ ಎರಡು ದಿನಗಳ ನಂತರ ಅರಣ್ಯದಲ್ಲಿ ಪತ್ತೆಯಾಗಿದೆ. ಆದರೆ, ಅಲ್ಲಿ ಸಿಕ್ಕಿದ್ದು ತಲೆಬುರುಡೆ ಮತ್ತು ಪ್ಯಾಂಟ್‌ ಮಾತ್ರ. ಮೃತ ವ್ಯಕ್ತಿಯನ್ನು ಸಿಂಹಗಳ ಹಿಂಡು ತಿಂದುಹಾಕಿರಬೇಕು ಎಂದು ಅಲ್ಲಿನ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

’ವನ್ಯಧಾಮಗಳನ್ನು ಅತಿಕ್ರಮವಾಗಿ ಪ್ರವೇಶ ಮಾಡುವುದು ಅತ್ಯಂತ ಅಪಾಯಕಾರಿ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ. ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರಂದನ, ಆತನ ಮಗಳ ರೋಧನವನ್ನು ನೋಡಲಾಗುತ್ತಿಲ್ಲ,’ ಎಂದು ಕ್ರುಗರ್‌ ಅಂತಾರಾಷ್ಟ್ರೀಯ ಉದ್ಯಾನದ ಕಾರ್ಯನಿರ್ವಾಹಕ ಗ್ಲೆನ್‌ ಪಿಲಿಪ್ಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.