
ಮಾಲೆ : ಭಾರತ ಸರ್ಕಾರದ ನೆರವಿನಿಂದ ನಿರ್ಮಿಸಲಾದ ಹನಿಮಾಧೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾಲ್ದೀವ್ಸ್ ಅಧ್ಯಕ್ಷ ಮೊಹಮದ್ ಮುಯಿಜು ಅವರು ಭಾನುವಾರ ಉದ್ಘಾಟಿಸಿದ್ದಾರೆ. ಈ ಯೋಜನೆಯು ದೇಶದ ಉತ್ತರ ಭಾಗದ ಪ್ರಗತಿಯ ದ್ವಾರ ಎಂದು ಅವರು ಕರೆದ್ದಾರೆ.
‘ಇದು ಕೇವಲ ವಿಮಾನ ನಿಲ್ದಾಣವಲ್ಲ, ಆರ್ಥಿಕ ಪರಿವರ್ತನೆಯ ಸಂಕೇತವಾಗಿದೆ. ಇದರಿಂದಾಗಿ ಪ್ರವಾಸೋದ್ಯಮ, ಕೃಷಿ, ಮೀನುಗಾರಿಕೆ ಮತ್ತು ಆರ್ಥಿಕತೆಯಲ್ಲಿ ಮತ್ತಷ್ಟು ಪ್ರಗತಿಯಾಗಲಿದೆ. ಉತ್ತರ ಮಾಲ್ದೀವ್ಸ್‌ನ ಸಾಮಾಜಿಕ ಅಭಿವೃದ್ಧಿ ಇದರಿಂದ ಸಾಧ್ಯವಾಗಲಿದೆ’ ಎಂದು ಮುಯಿಜು ಹೇಳಿದ್ದಾರೆ.
ಮಾಲ್ದೀವ್ಸ್ – ಭಾರತ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 60 ವರ್ಷಗಳಾಗಿರುವುದರಿಂದ ಈ ವಿಮಾನ ನಿಲ್ದಾಣವು ಉಭಯ ದೇಶಗಳ ಬಲವಾದ ಸಂಬಂಧದ ಸಂಕೇತವಾಗಿದೆ ಎಂದು ಮುಯಿಜು ಹೇಳಿದ್ದಾರೆ.
2019ರಲ್ಲಿ ಭಾರತದ ಎಕ್ಸಿಮ್ ಬ್ಯಾಂಕ್ ನೀಡಿದ 800 ಮಿಲಿಯನ್ ಅಮೆರಿಕ ಡಾಲರ್ (₹7 ಸಾವಿರ ಕೋಟಿ) ಸಾಲದಿಂದ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಹಣಕಾಸು ಒದಗಿಸಲಾಗಿದೆ ಎಂದು ‘ಸನ್.ಎಂವಿ’ ಸುದ್ದಿ ಪೋರ್ಟಲ್ ವರದಿ ಮಾಡಿದೆ.
ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ನಾಗರಿಕ ವಾಯುಯಾನ ಸಚಿವ ಕಿಂಜರಪು ರಾಮ ಮೋಹನ್ ನಾಯ್ಡು ಮತ್ತು ಉಭಯ ದೇಶಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.