ADVERTISEMENT

ಹೃತಿಕ್‌ ರೋಷನ್‌ ಮೇಲೆ ಕ್ರಷ್ ಹೊಂದಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 10:26 IST
Last Updated 11 ನವೆಂಬರ್ 2019, 10:26 IST
   

ನ್ಯೂಯಾರ್ಕ್‌: ಪ್ರೇಮಿಸಿ ಮದುವೆಯಾದವಳ ಮೇಲೆ ಪ್ರಭುತ್ವ ಸಾಧಿಸಲು ಹೊರಡುವ ಗಂಡಸಿನ ಆಳದಲ್ಲಿ ಅದ್ಯಾವ ಮಟ್ಟದ ಕ್ರೂರತೆ ಇರುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸೆಲೆಬ್ರಿಟಿಗಳ ಮೇಲೆ ಜನಸಾಮಾನ್ಯರು ಸೆಳೆತ (crush) ಹೊಂದುವುದು ಸಹಜ ಪ್ರಕ್ರಿಯೆ. ಇಂತಹ ‌ಭಾವಪ್ರಕ್ರಿಯೆಗೆ ಒಳಗಾಗಿದ್ದ ಪತ್ನಿಯ ಬಗ್ಗೆ ತೀವ್ರ ಅಸೂಯೆ ಹೊಂದಿದ್ದ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿ ತಾನೂ ಸಹ ನೇಣು ಬಿಗಿದುಕೊಂಡು ಸಾವಿಗೀಡಾದ ಘಟನೆ ಸಂಭವಿಸಿದೆ.‌ ವಿಪರ್ಯಾಸವೆಂದರೆ, ಇದು ನಡೆದಿರುವುದು ಭಾರತದಿಂದ ಸಾವಿರಾರು ಕಿಲೋಮೀಟರ್‌ ದೂರದಲ್ಲಿರುವ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ. ಈ ಮಹಿಳೆಯ ಕ್ರಷ್ ಬೇರಾರೂಅಲ್ಲ,ಬಾಲಿವುಡ್‌ ಖ್ಯಾತ ನಟ ಹೃತಿಕ್‌ ರೋಷನ್‌.

ಅಮೆರಿಕಾದ ನ್ಯೂಯಾರ್ಕ್‌ ನಗರದ ಕ್ವೀನ್ಸ್‌ ಪ್ರಾಂತದ ಜೆಮಿನಿ ಅಲ್ಟ್ರಾ ಲಾಂಜ್‌ ಬಾರ್‌ನಲ್ಲಿ ಪರಿಚಾರಕಿಯಾಗಿ ಕೆಲಸ ಮಾಡುತ್ತಿದ್ದ ಭಾರತ ಮೂಲದ ಮಹಿಳೆ ಡೋನೆ ದೊಜೋಯ್‌ (27). ಅವಳನ್ನು ಪ್ರೇಮಿಸಿ ಮದುವೆಯಾದವನು ಭಾರತದ ಮೂಲದವನೇ ಆದ ದಿನೇಶ್ವರ ಬುದ್ಧಿದತ್ತ್. ಈಗ ತನ್ನ ಪತಿಯನ್ನು ಕೊಲೆಗೈದು ತಾನೂ ಸಹ ಆತ್ಮಹತ್ಯೆ ಮಾಡಿಕೊಂಡವನು. ಇದಕ್ಕೆ ಕಾರಣವಾಗಿದ್ದೇ, ಹೃತಿಕ್‌ ಬಗೆಗೆ ದೋಜೋಯ್‌ಳಿಗಿದ್ದ ಆಕರ್ಷಣೆ.

‘ಕಹೋ ನ ಪ್ಯಾರ್‌ ಹೈ’ ಚಿತ್ರ ನೋಡಿದಾಗಿನಿಂದಲೇ ಹೃತಿಕ್‌ ರೋಷನ್‌ ಬಗ್ಗೆ ದೊಜೋಯ್‌ ಆಕರ್ಷಿತಳಾಗಿದ್ದಳು. ಅವರ ಎಲ್ಲ ಚಿತ್ರಗಳನ್ನು ತಪ್ಪದೇ ನೋಡುತ್ತಿದ್ದಳು. ಆ ಕಾರಣಕ್ಕೆ ಅವಳ ಗಂಡನಿಗೆ ಅಸೂಯೆ ಇತ್ತೆಂದು ತಿಳಿದುಬಂದಿದೆ.

‘ಅವನು ಕೆಲಸ ಮುಗಿಸಿ ಮನೆಗೆ ಬಂದಾಗ ಒಂದು ವೇಳೆ ದೊಜೋಯ್ ಹೃತಿಕ್‌ ರೋಷನ್‌ ಸಿನೆಮಾ ನೋಡುತ್ತ ಕುಳಿತಿದ್ದರೆ, ಕುಪಿತಗೊಂಡು ಟಿವಿ ಆಫ್‌ ಮಾಡಲು ಬುದ್ಧಿದತ್ತ್‌ ಒತ್ತಾಯಿಸುತ್ತಿದ್ದ. ಕಾರಣ ಕೇಳಿದರೆ ಹೃತಿಕ್‌ ಮೇಲೆ ನನಗೆ ಅಸೂಯೆ ಇದೆ. ನೀನು ಅವನನ್ನು ಇಷ್ಟಪಡುವುದು ನನಗೆ ಸಹಿಸಲಾಗುವುದಿಲ್ಲ,’ ಎನ್ನುತ್ತಾನೆಂದು ದೋಜೋಯ್‌ಳು ತನ್ನ ಸ್ನೇಹಿತೆ ರೋಡ್ನಿಯೊಂದಿಗೆ ನೋವು ಹಂಚಿಕೊಂಡಿದ್ದಳು.

ADVERTISEMENT

ಈ ಬಗ್ಗೆ ಹೇಳಿಕೆ ನೀಡಿರುವ ರೋಡ್ನಿ, ‘ದಿನೇಶ್ವರ್‌ ಬುದ್ಧಿದತ್ತ್‌ ತನ್ನ ಪತ್ನಿ ದಿಜೋಯ್‌ಳ ಮೇಲೆ ಪ್ರಭುತ್ವ ಸಾಧಿಸಲು ಹೆಣಗುತ್ತಿದ್ದ. ಬಾಲಿವುಡ್‌ ನಟ ಹೃತಿಕ್ ರೋಷನ್‌ ಬಗ್ಗೆ ದೊಜೋಯ್‌ ಹೊಂದಿದ್ದ ಅಭಿಮಾನದ ಬಗ್ಗೆ ತೀವ್ರ ಅಸೂಯೆಯೂ ಇತ್ತು,’ ಎಂದಿದ್ದಾಳೆ.

ಘಟನೆ ನಡೆಯುವ ಮುನ್ನ ಅವರಿಬ್ಬರೂ ಸಿನೆಮಾ ನೋಡುವುದಕ್ಕೆ ಹೋಗಿದ್ದರು. ಆಮೇಲೆ, ಆಲ್ಬರ್ಟ್‌ ರಸ್ತೆಯ ಓಜೋನ್‌ ಪಾರ್ಕ್‌ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ದೊಜೋಯ್‌ಳನ್ನು ಬುದ್ಧಿದತ್ತ್‌ ಕೊಲೆಗೈದಿದ್ದಾನೆ. ಆ ನಂತರ ತಾನು ಹೊವಾರ್ಡ್‌ ಬೀಚ್‌ನ ಹತ್ತಿರದ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಬುದ್ಧಿದತ್‌ ದೊಜೋಯ್‌ಳ ಮೇಲೆ ಹಲ್ಲೆ ಮಾಡಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ. ಆಮೇಲೆ, ಜಾಮೀನಿನ ಮೂಲಕ ಬಿಡುಗಡೆಯಾಗಿದ್ದನೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.