ADVERTISEMENT

ಕ್ಷಿಪಣಿ,ಡ್ರೋನ್‌ ದಾಳಿ: ಉಕ್ರೇನ್‌ನ ದೊಡ್ಡ ವಿದ್ಯುತ್‌ ಸ್ಥಾವರ ನಾಶಪಡಿಸಿದ ರಷ್ಯಾ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 12:47 IST
Last Updated 12 ಏಪ್ರಿಲ್ 2024, 12:47 IST
<div class="paragraphs"><p>ಉಕ್ರೇನ್‌ನ ಡೊನೆಟ್‌ಸ್ಕ್‌ ಪ್ರದೇಶದ ಚೇಸಿವ್ ಯಾರ್ ಪಟ್ಟಣದಲ್ಲಿ ಗುರುವಾರ ಬಾಂಬ್ ಸ್ಫೋಟದಿಂದ ಬೆಂಕಿ ಮತ್ತು ದಟ್ಟ ಹೊಗೆ ಮುಗಿಲೆತ್ತರಕ್ಕೆ ಕವಿದಿತ್ತು.</p></div>

ಉಕ್ರೇನ್‌ನ ಡೊನೆಟ್‌ಸ್ಕ್‌ ಪ್ರದೇಶದ ಚೇಸಿವ್ ಯಾರ್ ಪಟ್ಟಣದಲ್ಲಿ ಗುರುವಾರ ಬಾಂಬ್ ಸ್ಫೋಟದಿಂದ ಬೆಂಕಿ ಮತ್ತು ದಟ್ಟ ಹೊಗೆ ಮುಗಿಲೆತ್ತರಕ್ಕೆ ಕವಿದಿತ್ತು.

   

ಕೀವ್‌: ರಷ್ಯಾ ಪಡೆಗಳು ಉಕ್ರೇನ್‌ನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದ್ದು, ದೇಶದ ಬಹುದೊಡ್ಡ ವಿದ್ಯುತ್‌ ಸ್ಥಾವರವನ್ನು ಭಾರಿ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿ ನಾಶಪಡಿಸಿವೆ. ಉಳಿದ ಸ್ಥಾವರಗಳಿಗೂ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೀವ್‌, ಚೆರ್ಕಾಸಿ ಮತ್ತು ಝೈಟೊಮಿರ್ ಪ್ರದೇಶಗಳಿಗೆ ವಿದ್ಯುತ್‌ ಸರಬರಾಜು ಮಾಡುವ ಅತಿ ದೊಡ್ಡ ಸ್ಥಾವರವಾದ ಟ್ರಿಪಿಲ್ಸ್ಕಾ ಸ್ಥಾವರದ ಮೇಲೆ ಹಲವು ಕ್ಷಿಪಣಿ ಮತ್ತು ಡ್ರೋನ್‌ಗಳು ಅಪ್ಪಳಿಸಿವೆ.  ಟ್ರಾನ್ಸ್‌ಫಾರ್ಮರ್, ಟರ್ಬೈನ್‌ಗಳು ಮತ್ತು ಜನರೇಟರ್‌ಗಳು ಹೊತ್ತಿ ಉರಿದಿವೆ. ಈ ಸ್ಥಾವರದಿಂದ 30 ಲಕ್ಷ ಗ್ರಾಹಕರಿಗೆ ವಿದ್ಯುತ್‌ ಪೂರೈಕೆಯಾಗುತ್ತಿತ್ತು.

ADVERTISEMENT

ಸ್ಥಾವರಕ್ಕೆ ಮೊದಲ ಡ್ರೋನ್ ಅಪ್ಪಳಿಸುತ್ತಿದ್ದಂತೆ ಕಾರ್ಮಿಕರು, ಸುರಕ್ಷಿತ ಅಡಗುದಾಣಗಳನ್ನು ತಲುಪಿ ಜೀವ ಉಳಿಸಿಕೊಂಡರು ಎಂದು ಸ್ಥಾವರವನ್ನು ನಿಭಾಯಿಸುವ ಸೆಂಟ್ರೆನೆರ್ಗೊ ಕಂಪನಿಯ ಮೇಲ್ವಿಚಾರಣಾ ಮಂಡಳಿಯ ಅಧ್ಯಕ್ಷ ಆ್ಯಂಡ್ರಿ ಗೋಟಾ ಹೇಳಿದ್ದಾರೆ.

ಭೀಕರ ದಾಳಿಯಿಂದ ಸ್ಥಾವರ ಸಂಪೂರ್ಣ ಸುಟ್ಟು ಹೋಗಿದ್ದು, ಬೆಂಕಿಯ ಜ್ವಾಲೆ ಆವರಿಸಿತ್ತು. ಸುತ್ತಲೂ ದಟ್ಟ ಹೊಗೆ ಕವಿದಿತ್ತು. ದಾಳಿ ನಡೆದ ಕೆಲವು ತಾಸುಗಳ ನಂತರ ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸುವ ಕೆಲಸ ಮಾಡಿದರು ಎಂದು ಗೋಟ ಹೇಳಿದ್ದಾರೆ.

ಉಕ್ರೇನ್‌ ಎರಡನೇ ಅತಿ ದೊಡ್ಡ ನಗರ ಹಾರ್ಕಿವ್‌ ಮೇಲೆ ಗುರುವಾರ ರಾತ್ರಿ ಹತ್ತು ಬಾರಿ ದಾಳಿ ನಡೆದಿದ್ದು, ಬಹುತೇಕ ಇಂಧನ ಮೂಲಸೌಕರ್ಯಗಳು ಈ ದಾಳಿಯಲ್ಲಿ ಹಾನಿಗೀಡಾಗಿವೆ.

ಮಾಸ್ಕೊದಲ್ಲಿ ಮಾತನಾಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ರಷ್ಯಾದ ತೈಲ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿ ಉಕ್ರೇನ್ ನಡೆಸಿರುವ ದಾಳಿಗೆ ಇದು ಪ್ರತ್ಯುತ್ತರವೆಂದು ಪ್ರತಿಕ್ರಿಯಿಸಿದ್ದಾರೆ.  

ಪದೇ ಪದೇ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಆಗುತ್ತಿರುವುದರಿಂದ ಹಾರ್ಕಿವ್‌ ನಗರದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ವಿದ್ಯುತ್‌ ಇಲ್ಲದೇ ದಿನದೂಡುವಂತಾಗಿದೆ
– ಡಿಮಿಟ್ರಿ ಕುಲೆಬಾ ಉಕ್ರೇನ್‌ ವಿದೇಶಾಂಗ ಸಚಿವ
ನಮ್ಮ ಇಂಧನ ವಲಯದ ಮೇಲೆ ತೀರಾ ಕೆಟ್ಟ ಪರಿಣಾಮ ಬೀರಿದ ಅತ್ಯಂತ ಮಾರಕ ಕ್ಷಿಪಣಿ ದಾಳಿ ಇದಾಗಿದೆ
–ಹರ್ಮನ್ ಹಾಲುಶ್‌ಚೆಂಕೊ ಉಕ್ರೇನ್‌ ಇಂಧನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.