ADVERTISEMENT

Saudi Bus Accident | ಸೌದಿಯಲ್ಲಿ ಭೀಕರ ಬಸ್‌ ಅಪಘಾತ: ತೆಲಂಗಾಣದ 45 ಮಂದಿ ಸಾವು

ಪಿಟಿಐ
Published 17 ನವೆಂಬರ್ 2025, 15:40 IST
Last Updated 17 ನವೆಂಬರ್ 2025, 15:40 IST
<div class="paragraphs"><p>ಸೌದಿಯಲ್ಲಿ ಬಸ್ ಅಪಘಾತ</p></div>

ಸೌದಿಯಲ್ಲಿ ಬಸ್ ಅಪಘಾತ

   

ಹೈದರಾಬಾದ್‌/ ಜೆದ್ದಾ: ಸೌದಿ ಅರೇಬಿಯಾದ ಮಕ್ಕಾದಿಂದ ಮದೀನಾಕ್ಕೆ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಡೀಸೆಲ್ ಸಾಗಾಟದ ಟ್ಯಾಂಕರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದು, ತೆಲಂಗಾಣದ 45 ಮಂದಿ ಮೃತಪಟ್ಟಿದ್ದಾರೆ.

ಭಾರತೀಯ ಕಾಲಮಾನ ಸೋಮವಾರ ಬೆಳಿಗ್ಗೆ 4ಕ್ಕೆ ದುರಂತ ಸಂಭವಿಸಿದೆ. ಟ್ಯಾಂಕರ್‌ಗೆ ಅಪ್ಪಳಿಸಿದ ಬಸ್‌ಗೆ ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿದ್ದು, ಪ್ರಯಾಣಿಕರು ಸಜೀವ ದಹನಗೊಂಡರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ADVERTISEMENT

ಮೃತರೆಲ್ಲರೂ ಉಮ್ರಾ ನಿರ್ವಹಿಸಲು (ಮಕ್ಕಾ ಹಾಗೂ ಮದೀನಾ ತೀರ್ಥಯಾತ್ರೆ) ಈಚೆಗೆ ಸೌದಿ ಅರೇಬಿಯಾಕ್ಕೆ ತೆರಳಿದ್ದರು ಎಂದು ಹೈದರಾಬಾದ್‌ ಪೊಲೀಸ್‌ ಕಮಿಷನರ್‌ ವಿ.ಸಿ. ಸಜ್ಜನರ್ ಹೇಳಿದ್ದಾರೆ.

‘ಉಮ್ರಾ ಯಾತ್ರೆಗಾಗಿ 54 ಮಂದಿಯ ತಂಡ ನವೆಂಬರ್‌ 9ರಂದು ಸೌದಿ ಅರೇಬಿಯಾದ ಜೆದ್ದಾಕ್ಕೆ ಪ್ರಯಾಣಿಸಿದೆ. ಅವರು ನವೆಂಬರ್‌ 23ರಂದು ಹೈದರಾಬಾದ್‌ಗೆ ವಾಪಸಾಗುವವರಿದ್ದರು’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘54 ಯಾತ್ರಿಕರಲ್ಲಿ ನಾಲ್ವರು ಭಾನುವಾರ ಕಾರಿನಲ್ಲಿ ಪ್ರತ್ಯೇಕವಾಗಿ ಮದೀನಾಕ್ಕೆ ಪ್ರಯಾಣ ಬೆಳೆಸಿದರೆ, ಇನ್ನೂ ನಾಲ್ವರು ಮಕ್ಕಾದಲ್ಲೇ ಉಳಿದುಕೊಂಡರು. ಬಸ್‌ನಲ್ಲಿ 46 ಮಂದಿ ಪ್ರಯಾಣಿಸುತ್ತಿದ್ದರು. ಒಬ್ಬರು ಬದುಕುಳಿದಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ನಮ್ಮ ಕುಟುಂಬದ ಆರು ಮಂದಿ ಬಸ್‌ನಲ್ಲಿದ್ದರು. ಕೊನೆಯದಾಗಿ ಅವರ ಜತೆ ಸಂಪರ್ಕ ಸಾಧಿಸಿದಾಗ ಮದೀನಾ ತಲುಪಲು ಎರಡು ಗಂಟೆ ಪ್ರಯಾಣಿಸಬೇಕಿದೆ ಎಂಬ ಮಾಹಿತಿ ನೀಡಿದ್ದರು’ ಎಂದು ಹೈದರಾಬಾದ್‌ನ ನಿವಾಸಿ ಮೊಹಮ್ಮದ್‌ ಸಲ್ಮಾನ್‌ ತಿಳಿಸಿದರು.

‘ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಶೋಯಬ್ ಆಗಿದ್ದು, ಬಸ್‌ನ ಕಿಟಕಿಯ ಗಾಜು ಒಡೆದು ಹೊರಬಂದಿದ್ದಾರೆ. ಅವರ ಕೈಗಳಿಗೆ ಸುಟ್ಟ ಗಾಯಗಳಾಗಿವೆ’ ಎಂದು ಇನ್ನೊಬ್ಬ ನಿವಾಸಿ ಮೊಹಮ್ಮದ್‌ ಬುರ್ಹಾನ್‌ ಹೇಳಿದರು.

ಮೃತರ ನಿಖರ ಸಂಖ್ಯೆ ಬಗ್ಗೆ ಸೌದಿ ಅರೇಬಿಯಾದ ಅಧಿಕಾರಿಗಳು ಅಥವಾ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಸೌದಿಗೆ ಪ್ರಯಾಣಿಸಲಿರುವ ಅಜರ್‌ ನೇತೃತ್ವದ ತಂಡ: 

ಮೃತರ ಕುಟುಂಬದ ಸದಸ್ಯರು, ಸಂಬಂಧಿಕರಿಗೆ ನೆರವಾಗಲು ಹಾಗೂ ಪರಿಹಾರ ಕಾರ್ಯದಲ್ಲಿ ಸಮನ್ವಯ ಸಾಧಿಸಲು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮೊಹಮ್ಮದ್ ಅಜರುದ್ದೀನ್ ನೇತೃತ್ವದ ತಂಡವನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.

ಮೃತರ ಅಂತ್ಯಕ್ರಿಯೆಯನ್ನು ಸೌದಿ ಅರೇಬಿಯಾದಲ್ಲೇ ನಡೆಸಲು ತೀರ್ಮಾನಿಸಲಾಗಿದೆ. ಪ್ರತಿ ಸಂತ್ರಸ್ತ ಕುಟುಂಬದ ಇಬ್ಬರು ಸದಸ್ಯರನ್ನು ಸೌದಿ ಅರೇಬಿಯಾಕ್ಕೆ ಕರೆದೊಯ್ಯಲಾಗುವುದು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. 

ಎಐಎಂಐಎಂ ಪಕ್ಷದ ಒಬ್ಬ ಶಾಸಕ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಅಜರುದ್ದೀನ್‌ ನೇತೃತ್ವದ ತಂಡದಲ್ಲಿ ಇರುವರು ಎಂದು ಹೇಳಿದೆ.

ಒಂದೇ ಕುಟುಂಬದ 18 ಮಂದಿ
ಹೈದರಾಬಾದ್‌ನ ವಿದ್ಯಾನಗರದಲ್ಲಿ ನೆಲಸಿರುವ ಒಂದೇ ಕುಟುಂಬದ ಮೂರು ತಲೆಮಾರುಗಳಿಗೆ ಸೇರಿದ 18 ಮಂದಿ ಮೃತರಲ್ಲಿ ಸೇರಿದ್ದಾರೆ. ಇವರಲ್ಲಿ 9 ಮಕ್ಕಳೂ ಇದ್ದಾರೆ. 70 ವರ್ಷದ ಸಲಾಹುದ್ದೀನ್‌ ಶೇಖ್‌ ಅವರು ಪತ್ನಿ ಪುತ್ರರು  ಸೊಸೆಯಂದಿರು ಪುತ್ರಿಯರು ಅಳಿಯಂದಿರು ಮತ್ತು ಮೊಮ್ಮಕ್ಕಳೊಂದಿಗೆ ಉಮ್ರಾಗೆ ತೆರಳಿದ್ದರು. ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿ ಸಲಾಹುದ್ದೀನ್‌ ಅವರಿಗೆ ತಲಾ ಮೂವರು ಪುತ್ರಿಯರು ಮತ್ತು ಪುತ್ರರು ಇದ್ದಾರೆ ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದರು. ಅವರ ಒಬ್ಬ ಪುತ್ರ ಅಮೆರಿಕದಲ್ಲಿದ್ದು ಇವರೊಂದಿಗೆ ಉಮ್ರಾಗೆ ತೆರಳಿಲ್ಲ. ಕುಟುಂಬದ ಇತರ ಎಲ್ಲರೂ ಸೌದಿಗೆ ಪ್ರಯಾಣಿಸಿದ್ದರು.
ಎಲ್ಲ ನೆರವು: ಪ್ರಧಾನಿ
ಮದೀನಾದಲ್ಲಿ ನಡೆದ ಅಪಘಾತದಲ್ಲಿ ಭಾರತೀಯರು ಮೃತಪಟ್ಟ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ರಿಯಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮತ್ತು ಜೆದ್ದಾದಲ್ಲಿರುವ ಕಾನ್ಸುಲೇಟ್ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುತ್ತಿದೆ. ನಮ್ಮ ಅಧಿಕಾರಿಗಳು ಸೌದಿ ಅರೇಬಿಯಾದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ’ ಎಂದಿದ್ದಾರೆ.
ಹುಬ್ಬಳ್ಳಿ ವ್ಯಕ್ತಿ ಮೃತ
ಸೌದಿ ಅರೆಬಿಯಾದ ಮಕ್ಕಾ–ಮದೀನಾ ರಸ್ತೆಯಲ್ಲಿ ಸಂಭವಿಸಿದ ಬಸ್‌ ಅಪಘಾತದಲ್ಲಿ ಹುಬ್ಬಳ್ಳಿಯ ಗಣೇಶಪೇಟೆಯ ಸಣ್ಣ ಮಸೀದಿ ಸಮೀಪದ ಅಬ್ದುಲ್‌ ಗನಿ ಶಿರಹಟ್ಟಿ (52) ಎಂಬವರು ಮೃತಪಟ್ಟಿ ದ್ದಾರೆ ಎಂದು ಕುಟುಂಬದ ಮೂಲಗಳು ದೃಢಪಡಿಸಿವೆ.ಅಬ್ದುಲ್‌ ಗನಿ ಅವರು 20 ವರ್ಷಗಳಿಂದ ದುಬೈನಲ್ಲಿರುವ ಅಬುಧಾಬಿ ಇಂಟರ್‌ನ್ಯಾಷನಲ್‌ ಹೋಟೆಲ್‌ನಲ್ಲಿ ಚಾಲಕ ರಾಗಿದ್ದರು. ಅಲ್ಲಿಯೇ ನೆಲಸಿದ್ದ ಅವರು, ನವೆಂಬರ್ 9ರಂದು ದುಬೈನಿಂದ ಮಕ್ಕಾ–ಮದೀನಾಕ್ಕೆ ಹೈದರಾಬಾದ್‌ನ ಸ್ನೇಹಿತರ ಜೊತೆ ಸೇರಿ ಪ್ರಯಾಣ ಕೈಗೊಂಡಿದ್ದರು. ಅವರಿಗೆ ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.