ADVERTISEMENT

ಮೆಹುಲ್‌ ಚೋಕ್ಸಿ ಹಸ್ತಾಂತರ: ಭಾರತದಿಂದ ಖಾಸಗಿ ವಿಮಾನ ಬಂದಿದೆ ಎಂದ ಆಂಟಿಗುವಾ ಪಿಎಂ

ಏಜೆನ್ಸೀಸ್
Published 30 ಮೇ 2021, 7:13 IST
Last Updated 30 ಮೇ 2021, 7:13 IST
ಮೆಹುಲ್‌ ಚೋಕ್ಸಿ
ಮೆಹುಲ್‌ ಚೋಕ್ಸಿ   

ಡೊಮಿನಿಕಾ:ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯ ಗಡಿಪಾರಿಗೆ ಸಂಬಂಧಿಸಿದ ಮಾಹಿತಿ ಮತ್ತುದಾಖಲೆಗಳುಳ್ಳ ಖಾಸಗಿ ವಿಮಾನ ಭಾರತದಿಂದ ಡೊಗ್ಲಾಸ್-ಚಾರ್ಲ್ಸ್ ವಿಮಾನ ನಿಲ್ದಾಣ ತಲುಪಿದೆ ಎಂದು ಆಂಟಿಗುವಾ ಪ್ರಧಾನಿ ಗಾಸ್ಟನ್ ಬ್ರೌನ್ ಭಾನುವಾರ ತಿಳಿಸಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚಿಸಿ ಭಾರತದಿಂದ ಪರಾರಿಯಾಗಿರುವ ಚೋಕ್ಸಿಯನ್ನು ಡೊಮಿನಿಕಾದಲ್ಲಿ ಕೆಲ ದಿನಗಳ ಹಿಂದೆ ಬಂಧಿಸಲಾಗಿತ್ತು.

ಭಾರತ ಸರ್ಕಾರವು ಚೋಕ್ಸಿ ಗಡಿಪಾರಿಗೆ ಸಂಬಂಧಿಸಿದ ದಾಖಲೆಗಳನ್ನು ವಿಮಾನದ ಮೂಲಕ ಕಳುಹಿಸಿಕೊಟ್ಟಿದೆ.ಭಾರತದ ನ್ಯಾಯಾಲಯಗಳಲ್ಲಿನ ಕೆಲವು ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದು ಅವುಗಳಲ್ಲಿ ಚೋಕ್ಸಿಯು ವಂಚಿಸಿ ಪರಾರಿಯಾಗಿರುವ ವ್ಯಕ್ತಿ ಎಂಬುದನ್ನು ಖಚಿತಪಡಿಸಲು ಪುರಾವೆಗಳಿವೆ ಎಂಬುದಾಗಿ ತಿಳಿದಿದ್ದೇನೆ. ಈ ದಾಖಲೆಗಳನ್ನು ಡೊಮಿನಿಕಾ ನ್ಯಾಯಾಲಯದ ನ್ಯಾಯಾಧೀಶರು ಪರಿಗಣಿಸಬಹುದು. ಪರಿಣಾಮವಾಗಿ ಚೋಕ್ಸಿಯನ್ನು ಭಾರತಕ್ಕೆ‌ ಹಸ್ತಾಂತರಿಸುವ ಪ್ರಕ್ರಿಯೆ ನೆರವೇರಲಿದೆ ಎಂಬುದಾಗಿ ಭಾವಿಸಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಮೇ 28ರಂದು ನವದೆಹಲಿಯಿಂದ ತೆರಳಿದ್ದ ವಿಮಾನ ಮ್ಯಾಡ್ರಿಡ್ ಮೂಲಕ ಡೊಮಿನಿಕಾ ತಲುಪಿತ್ತು.

ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದಲ್ಲಿ ಬಂಧಿಸಲಾಗಿದೆ ಎಂದು ಅಲ್ಲಿನ ಮಾಧ್ಯಮ ಇದೇ 26ರಂದು ವರದಿ‌ ಮಾಡಿತ್ತು. ಚೋಕ್ಸಿ ಅವರಿಗೆ ಕಾನೂನು ಸಲಹೆ ಪಡೆಯಲು ಅವಕಾಶ ನೀಡದಿರುವುದಕ್ಕೆ ಅವರ ಪರ ವಕೀಲರು, ಡೊಮಿನಿಕಾ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಬಳಿಕ ನ್ಯಾಯಾಲಯ ಚೋಕ್ಸಿ ಹಸ್ತಾಂತರ ಪ್ರಕ್ರಿಯೆಗೆ ತಡೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.