ಕ್ಸೆನಿಯಾ ಅಲೆಕ್ಸಾಂಡ್ರೊವಾ
ಇನ್‌ಸ್ಟಾಗ್ರಾಂ ಚಿತ್ರ
ಮಾಸ್ಕೋ: ಕಾರು ಅಪಘಾತದಲ್ಲಿ ಮಿಸ್ ಯೂನಿವರ್ಸ್ 2017ರ ಸ್ಪರ್ಧಿ ರಷ್ಯಾದ ಕ್ಸೆನಿಯಾ ಅಲೆಕ್ಸಾಂಡ್ರೊವಾ(30) ಮೃತಪಟ್ಟಿದ್ದಾರೆ.
‘ಜುಲೈನಲ್ಲಿ ಟ್ವೆರ್ ಒಬ್ಲಾಸ್ಟ್ ಪ್ರದೇಶದಲ್ಲಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಕ್ಸೆನಿಯಾ ಅವರನ್ನು ಸ್ಕ್ಲಿಫೋಸೊವ್ಸ್ಕಿಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೇ ಆಗಸ್ಟ್ 12ರಂದು ಅವರು ಮೃತಪಟ್ಟಿದ್ದಾರೆ’ ಎಂದು ರಷ್ಯಾದ ಸುದ್ದಿಸಂಸ್ಥೆ ‘ಹೋಲಾ’ ವರದಿ ಮಾಡಿದೆ.
ಅಪಘಾತ ನಡೆದ ವೇಳೆ ಕ್ಸೆನಿಯಾ ಪತಿ ಇಲ್ಯಾ ಅವರು ಕಾರು ಚಲಾಯಿಸುತ್ತಿದ್ದರು. ಈ ವೇಳೆ ಕಡವೆಯೊಂದು ಕಾರಿಗೆ ಅಡ್ಡ ಬಂದಿದ್ದು, ಕಾರಿನ ವಿಂಡ್ ಶೀಲ್ಡ್‌ಗೆ ಬಲವಾಗಿ ಅಪ್ಪಳಿಸಿದೆ. ಇದರ ಪರಿಣಾಮ ಕ್ಸೆನಿಯಾ ಅವರು ತೀವ್ರವಾಗಿ ಗಾಯಗೊಂಡಿದ್ದರು ಎಂದು ವರದಿ ಹೇಳಿದೆ.
‘ಆ ಒಂದು ಕ್ಷಣ ಏನಾಯಿತು ಎಂಬುದೇ ನನಗೆ ತಿಳಿದಿಲ್ಲ. ಅವಳು(ಕ್ಸೆನಿಯಾ) ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಅವಳ ತಲೆಯಿಂದ ರಕ್ತ ಸುರಿಯುತ್ತಿತ್ತು. ಎಲ್ಲವೂ ರಕ್ತಮಯವಾಗಿತ್ತು. ತಲೆಬರುಡೆಯ ಮುಂಭಾಗದ ಮೂಳೆಗಳು ಮುರಿದ್ದವು’ ಎಂದು ಪತಿ ಇಲ್ಯಾ ಅವರು ಮಾಧ್ಯಮದವರ ಮುಂದೆ ಕಣ್ಣೀರು ಹಾಕಿದ್ದಾರೆ.
ಕ್ಸೆನಿಯಾ ಅವರ ಸಾವಿಗೆ ‘ಮಿಸ್ ಯೂನಿವರ್ಸ್’ ಸಂಸ್ಥೆಯು ಸಂತಾಪ ಸೂಚಿಸಿ ಪೋಸ್ಟ್ ಹಂಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.