ನವದೆಹಲಿ: ‘ಅಮೆರಿಕದ ಕೋರ್ಟ್‌ನಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಮೊಕದ್ದಮೆ ದಾಖಲಾಗಿರುವುದು ‘ಖಾಸಗಿ ವಿಷಯ’. ಎರಡು ದೇಶಗಳ ನಾಯಕರು ಇಂತಹ ಖಾಸಗಿ ಸಂಗತಿ ಚರ್ಚಿಸಲು ಭೇಟಿ ಆಗುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ನಡೆದ ಸಭೆಯ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಮೋದಿ ಹೀಗೆ ಪ್ರತಿಕ್ರಿಯೆ ನೀಡಿದರು.
ಟ್ರಂಪ್ ಜೊತೆಗಿನ ಸಭೆಯಲ್ಲಿ ಅದಾನಿ ವಿಷಯವೂ ಚರ್ಚೆಯಾಯಿತೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಎರಡು ದೇಶಗಳ ನಾಯಕರು ಎಂದಿಗೂ ಇಂತಹ ವಿಷಯಗಳ ಚರ್ಚೆಗೆ ಭೇಟಿ ಆಗುವುದಿಲ್ಲ. ಚರ್ಚಿಸುವುದೂ ಇಲ್ಲ’ ಎಂದು ಮೋದಿ ಪ್ರತಿಕ್ರಿಯಿಸಿದರು.
ಅದಾನಿ ಅವರು ಪ್ರಧಾನಿಯವರ ಆಪ್ತ ಎಂದು ಬಿಂಬಿಸುವುದನ್ನು ಉಲ್ಲೇಖಿಸಿ, ‘ಮೊದಲಿಗೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ನಮ್ಮ ಸಂಸ್ಕೃತಿ, ಸಿದ್ಧಾಂತಗಳು ‘ವಸುಧೈವ ಕುಟುಂಬಕಂ’ ಧ್ಯೆಯ ಆಧರಿಸಿದೆ. ಭಾರತೀಯರೆಲ್ಲರು ನನ್ನವರು ಎಂದು ಭಾವಿಸುತ್ತೇನೆ’ ಎಂದರು.
ಬಂಡವಾಳ ಸೆಳೆಯಲು ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಅಕ್ರಮ ಹಾಗೂ ನಿಯಮಗಳ ಉಲ್ಲಂಘನೆ ಆರೋಪದಡಿ ಉದ್ಯಮಿ ಗೌತಮ್ ಅದಾನಿ, ಅವರ ಸಂಬಂಧಿ ಸಾಗರ್ ಅದಾನಿ ವಿರುದ್ಧ ಅಮೆರಿಕ ಫೆಡರಲ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಅದಾನಿ ವಿರುದ್ಧದ ಪ್ರಕರಣವನ್ನು ಉಲ್ಲೇಖಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ‘ಇದು ಖಾಸಗಿ ಸಂಸ್ಥೆ, ಉದ್ಯಮಿ ಮತ್ತು ಅಮೆರಿಕದ ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ವಿಷಯ’ ಎಂದು ಪ್ರತಿಕ್ರಿಯಿಸಿತ್ತು.
ನವದೆಹಲಿ: ‘ಅದಾನಿ ಪ್ರಕರಣ ‘ಖಾಸಗಿ ವಿಷಯ’ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಮೆರಿಕದಲ್ಲೂ ಉದ್ಯಮಿ ವಿರುದ್ಧದ ಭ್ರಷ್ಟಾಚಾರ ಆರೋಪ ಮುಚ್ಚಿಕೊಳ್ಳಲು ಯತ್ನಿಸಿದ್ದಾರೆ’ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್‌ಗಾಂಧಿ ಟೀಕಿಸಿದ್ದಾರೆ. ‘ಎಕ್ಸ್’ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು ‘ದೇಶದಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ಮೌನವಹಿಸುತ್ತಾರೆ. ವಿದೇಶದಲ್ಲಿ ಪ್ರಶ್ನಿಸಿದರೆ ಅದು ಖಾಸಗಿ ವಿಷಯ ಆಗುತ್ತದೆ. ಈ ಮೂಲಕ ಮೋದಿಜಿ ವಿದೇಶದಲ್ಲಿಯೂ ಅದಾನಿ ಭ್ರಷ್ಟಾಚಾರ ಆರೋಪವನ್ನು ಮುಚ್ಚಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.