ಬ್ರಿಟನ್ ಪ್ರಧಾನಿ ಜತೆ ಚಹಾ ಸವಿದ ಪ್ರಧಾನಿ ಮೋದಿ
ಚಿತ್ರ ಕೃಪೆ: narendramodi
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಜತೆ ಭಾರತದ ವ್ಯಕ್ತಿ ತಯಾರಿಸಿದ ಚಹಾ ಸವಿದಿದ್ದಾರೆ.
ಈ ಕುರಿತು ಮೋದಿ ಫೋಟೊ ಹಂಚಿಕೊಂಡಿದ್ದು, ‘ಚೆಕರ್ಸ್‌ನಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ‘ಚಾಯ್ ಪೇ ಚರ್ಚಾ’... ಭಾರತ-ಯುಕೆ ಸಂಬಂಧಗಳನ್ನು ಬಲಪಡಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಭಾರತ ಮೂಲದ ಅಖಿಲ್ ಪಟೇಲ್ ಉಭಯ ನಾಯಕರಿಗೆ ಚಹಾ ತಯಾರಿಸಿ ಕೊಟ್ಟಿದ್ದಾರೆ. ಈ ವೇಳೆ ಅವರ ನಡುವಿನ ಸಂಭಾಷಣೆಯ ವಿಡಿಯೊ ತುಣುಕು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಅಖಿಲ್, ಮೋದಿ ಮತ್ತು ಸ್ಟಾರ್ಮರ್ ಅವರಿಗೆ ಮಸಾಲೆ ಚಹಾವನ್ನು ನೀಡಿದ್ದು, ‘ಈ ವಿಶೇಷ ಚಹಾದಲ್ಲಿ ಮಸಾಲೆಗಳ ಮಿಶ್ರಣವಿದೆ. ಈ ಮಸಾಲೆ ಚಹಾದ ಮೂಲ ಭಾರತವಾಗಿದೆ. ಚಹಾ ಪುಡಿ ಅಸ್ಸಾಂ ರಾಜ್ಯದ್ದು, ಮಸಾಲೆ ಕೇರಳದ್ದಾಗಿದೆ. ಅಲ್ಲದೆ ಇದಕ್ಕೆ ಏಲಕ್ಕಿ, ಜಾಯಿಕಾಯಿ, ದಾಲ್ಚಿನ್ನಿ ಮತ್ತು ಶುಂಠಿ ಪುಡಿಯನ್ನು ಸೇರಿಸಲಾಗಿದೆ’ ಎಂದು ವಿವರಿಸಿದ್ದಾರೆ. ಮುಂದುವರಿದು, ‘ಒಬ್ಬ ಚಾಯ್‌ವಾಲ ಜತೆಗೆ ಮತ್ತೊಬ್ಬ’ ಎಂದು ಮೋದಿಯವರಿಗೆ ಅಖಿಲ್ ಹೇಳುತ್ತಾರೆ.
ಈ ವೇಳೆ ಮೋದಿ, ಸ್ಟಾರ್ಮರ್ ಅವರಿಗೆ ‘ನೀವು ಭಾರತದ ರುಚಿ ಸವಿಯಲಿದ್ದೀರಿ’ ಎಂದು ಹೇಳಿದ್ದು, ಇಬ್ಬರೂ ಚಹಾ ಸವಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.