ನರೇಂದ್ರ ಮೋದಿ
(ಪಿಟಿಐ ಚಿತ್ರ)
ಲಂಡನ್: ಯಶಸ್ವಿ ಬ್ರಿಟನ್ ಪ್ರವಾಸದ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾಲ್ದೀವ್ಸ್‌ಗೆ ಪ್ರಯಾಣ ಕೈಗೊಂಡಿದ್ದಾರೆ.
ಮೋದಿ ಅವರ ಬ್ರಿಟನ್ ಪ್ರವಾಸದ ವೇಳೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಭಾರತ ಮತ್ತು ಬ್ರಿಟನ್ ಗುರುವಾರ ಸಹಿ ಹಾಕಿತ್ತು.
ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಪ್ರಾದೇಶಿಕ ಹಿತಾಸಕ್ತಿಯ ವಿಷಯಗಳು ಒಳಗೊಂಡಂತೆ ಜಾಗತಿಕ ಸಮಸ್ಯೆಗಳ ಕುರಿತಾಗಿಯೂ ಚರ್ಚಿಸಿದ್ದಾರೆ.
ಬಹಳ ಮುಖ್ಯವಾದ ಬ್ರಿಟನ್ ಪ್ರವಾಸ ಮುಕ್ತಾಯಗೊಂಡಿದೆ. ಈ ಭೇಟಿಯು ಮುಂದಿನ ಪೀಳಿಗೆಗೆ ಪ್ರಯೋಜನವನ್ನು ನೀಡಲಿದ್ದು, ಬೆಳವಣಿಗೆ ಹಾಗೂ ಸಮೃದ್ಧಿಯಿಂದ ಕೂಡಿರಲಿದೆ. ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್, ಬ್ರಿಟನ್ ಸರ್ಕಾರ ಮತ್ತು ಅಲ್ಲಿನ ಜನತೆಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬ್ರಿಟನ್ ದೊರೆ ಮೂರನೇ ಕಿಂಗ್ಸ್ ಚಾರ್ಲ್ಸ್ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ.
ಮೂರನೇ ಕಿಂಗ್ ಚಾರ್ಲ್ಸ್ ಅವರೊಂದಿಗೆ ಫಲಪ್ರದದಾಯಕ ಚರ್ಚೆ ನಡೆಯಿತು. ಭಾರತ-ಬ್ರಿಟನ್ ಬಾಂಧವ್ಯದ ವಿವಿಧ ಅಂಶಗಳ ಕುರಿತು ಮಾತುಕತೆ ನಡೆಸಲಾಯಿತು. ಇದರಲ್ಲಿ ಸಿಇಟಿಎ ಮತ್ತು 'ವಿಷನ್ 2035' ಸೇರಿದಂತೆ ವ್ಯಾಪಾರ ಹಾಗೂ ಹೂಡಿಕೆಯಲ್ಲಿನ ವಿಷಯಗಳು ಸೇರಿವೆ. ಶಿಕ್ಷಣ, ಆರೋಗ್ಯ, ಯೋಗಕ್ಷೇಮ, ಯೋಗ, ಆಯುರ್ವೇದ ಕುರಿತಾಗಿಯೂ ಚರ್ಚಿಸಲಾಯಿತು. ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರತೆಯ ಕುರಿತಾಗಿಯೂ ಮಾತನಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ 'ಏಕ್ ಪೇಡ್ ಮಾ ಕೆ ನಾಮ್' (ತಾಯಿಯ ಹೆಸರಿನಲ್ಲಿ ಒಂದು ಮರ) ಅಭಿಯಾನದ ಭಾಗವಾಗಿ ಮೂರನೇ ಕಿಂಗ್ ಚಾರ್ಲ್ಸ್ ಅವರಿಗೆ ಗಿಡವನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.