ADVERTISEMENT

ಮುಂಬೈ ದಾಳಿಕೋರರು ಪಾಕ್‌ನಲ್ಲಿ ಓಡಾಡಿಕೊಂಡಿದ್ದಾರೆ: ಪಾಕ್‌ನಲ್ಲಿ ಅಖ್ತರ್‌ ಹೇಳಿಕೆ

ಲಾಹೋರ್‌ನಲ್ಲಿ ಜಾವೆದ್‌ ಅಖ್ತರ್‌ ಬಹಿರಂಗ ಹೇಳಿಕೆ

ಪಿಟಿಐ
Published 21 ಫೆಬ್ರುವರಿ 2023, 14:28 IST
Last Updated 21 ಫೆಬ್ರುವರಿ 2023, 14:28 IST
ಲಾಹೋರ್‌ನಲ್ಲಿ ನಡೆದ ಫೈಜ್‌ ಉತ್ಸವದಲ್ಲಿ ಭಾಗವಹಿಸಿದ್ದ ಕವಿ ಜಾವೆದ್‌ ಅಖ್ತರ್‌. ಕಾರ್ಯಕ್ರಮದ ನಿರೂಪಕ ಆದಿಲ್‌ ಹಸನ್‌ ಕೂಡ ಇದ್ದಾರೆ. –ಪಿಟಿಐ ಚಿತ್ರ
ಲಾಹೋರ್‌ನಲ್ಲಿ ನಡೆದ ಫೈಜ್‌ ಉತ್ಸವದಲ್ಲಿ ಭಾಗವಹಿಸಿದ್ದ ಕವಿ ಜಾವೆದ್‌ ಅಖ್ತರ್‌. ಕಾರ್ಯಕ್ರಮದ ನಿರೂಪಕ ಆದಿಲ್‌ ಹಸನ್‌ ಕೂಡ ಇದ್ದಾರೆ. –ಪಿಟಿಐ ಚಿತ್ರ   

ಲಾಹೋರ್‌ (ಪಿಟಿಐ): ಮುಂಬೈ ಮೇಲೆ ದಾಳಿ ನಡೆಸಿದವರು (26/11) ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ’ ಎಂದು ಕವಿ, ಗೀತರಚನೆಕಾರ ಜಾವೆದ್‌ ಅಖ್ತರ್‌ ಅವರು ಹೇಳಿದರು.

ಉರ್ದುವಿನ ಪ್ರಸಿದ್ಧ ಕವಿ ಫೈಜ್‌ ಅಹಮದ್‌ ಫೈಜ್‌ ಅವರ ಸ್ಮರಣಾರ್ಥ ಭಾನುವಾರ ಇಲ್ಲಿ ಆಯೋಜಿಸಿದ್ದ ಫೈಜ್‌ ಉತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಅವರು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ಜಾವೆದ್‌ ಉತ್ತರ ನೀಡಿದ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಪಾಕಿಸ್ತಾನವು ಸಕಾರಾತ್ಮಕವಾದ, ಸ್ನೇಹಪರವಾದ ಹಾಗೂ ಪ್ರೀತಿಯನ್ನು ಪ್ರತಿಪಾದಿಸುವ ದೇಶವಾಗಿದೆ ಎಂದು ನೀವು ಭಾರತೀಯರಿಗೆ ಹೇಳಬೇಕು’ ಎಂದು ಸಭಿಕರೊಬ್ಬರು ಅಖ್ತರ್‌ ಅವರಿಗೆ ಹೇಳಿದರು.

ADVERTISEMENT

‘ಪರಸ್ಪರರ ಮೇಲೆ ದೂರುತ್ತಾ ಕೂರುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಎರಡೂ ದೇಶಗಳ ಮಧ್ಯೆ ಬಿಗುವಿನ ವಾತಾವರಣ ಇದೆ. ಇದನ್ನು ತಿಳಿಗೊಳಿಸುವ ಕೆಲಸ ಮಾಡಬೇಕು’ ಎಂದು ಅಖ್ತರ್‌ ಹೇಳಿದರು.

‘ನಾವು ಮುಂಬೈನಲ್ಲಿ ವಾಸಿಸುವವರು. ನಮ್ಮ ನಗರದ ಮೇಲಾದ ದಾಳಿಯನ್ನು ನಾವು ಕಂಡಿದ್ದೇವೆ. ದಾಳಿಕೋರರು ನಾರ್ವೆ ಅಥವಾ ಈಜಿಪ್ಟ್‌ನಿಂದ ಬಂದವರೇನೂ ಅಲ್ಲ. ಅಪರಾಧಿಗಳು ನಿಮ್ಮ ದೇಶದಲ್ಲೇ ತಿರುಗಾಡಿಕೊಂಡಿದ್ದಾರೆ. ಆದ್ದರಿಂದ, ಭಾರತೀಯರು ತಮ್ಮ ಹೃದಯದಲ್ಲಿ ವೇದನೆ ಇಟ್ಟುಕೊಂಡಿದ್ದರೆ, ನೀವು ಬೇಸರ ಮಾಡಿಕೊಳ್ಳಬಾರದು’ ಎಂದರು.

ಅಖ್ತರ್‌ ಅವರ ಹೇಳಿಕೆಗೆ ಬಾಲಿವುಡ್‌ ನಟಿ ಕಂಗನಾ ರನೌತ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಘರ್‌ ಮೇ ಗುಸ್ಕೆ ಮಾರಾ’ (ಅವರ ದೇಶಕ್ಕೇ ಹೋಗಿ ಹೊಡೆದರು) ಎಂದು ಟ್ವೀಟ್‌ ಮಾಡಿದ್ದಾರೆ.

‘ಲತಾ ಕಾರ್ಯಕ್ರಮ ಆಯೋಜಿಸಲೇ ಇಲ್ಲ’

‘ನಾವು ನುಸ್ರತ್‌ ಫತೆಹ್‌ ಅಲಿ ಖಾನ್‌ ಹಾಗೂ ಮೆಹದಿ ಹಸನ್‌ ಅವರ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಆದರೆ, ಲತಾ ಮಂಗೇಶ್ಕರ್‌ ಅವರ ಕಾರ್ಯಕ್ರಮವನ್ನು ಒಮ್ಮೆಯೂ ನೀವು ಆಯೋಜಿಸಲಿಲ್ಲ’ ಎಂದರು. ಅಖ್ತರ್‌ ಅವರು ಹೀಗೆ ಹೇಳುತ್ತಿದ್ದಂತೆಯೇ ಸಭಿಕರು ಜೋರಾಗಿ ಕರತಾಡನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.