ನರೇಂದ್ರ ಮೋದಿ
(ಪಿಟಿಐ ಚಿತ್ರ)
ವಾಷಿಂಗ್ಟನ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನು ವಾಪಾಸ್ ಕಳುಹಿಸಿದ್ದರ ಕುರಿತು ಇದೇ ಮೊದಲ ಬಾರಿಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಕ್ರಮ ವಲಸಿಗರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, 'ಮಾನವ ಕಳ್ಳಸಾಗಣೆಯ ವ್ಯವಸ್ಥೆಯ ವಿರುದ್ಧ ಹೋರಾಡುವ ಅಗತ್ಯವಿದೆ' ಎಂದು ಹೇಳಿದ್ದಾರೆ.
'ಈ ಪ್ರಶ್ನೆ ಕೇವಲ ಭಾರತಕ್ಕಷ್ಟೇ ಸೀಮಿತವಲ್ಲ. ಜಾಗತಿಕ ಸಮಸ್ಯೆಯಾಗಿದೆ. ಬೇರೆ ದೇಶಗಳಲ್ಲಿ ಅಕ್ರಮವಾಗಿ ವಾಸಿಸುವವರಿಗೂ ಅನ್ವಯಿಸುತ್ತದೆ. ಕಾನೂನಿನ ಪ್ರಕಾರ ಅವರಿಗೆ ಅಲ್ಲಿ ವಾಸಿಸುವ ಹಕ್ಕು ಇಲ್ಲ' ಎಂದು ಹೇಳಿದ್ದಾರೆ.
'ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ಸ್ವೀಕರಿಸಲು ಭಾರತ ಯಾಗಾವಲೂ ಸಿದ್ಧವಿದೆ ಎಂದು ಹೇಳುತ್ತಲೇ ಬಂದಿದ್ದೇವೆ' ಎಂದು ಅವರು ಪ್ರತಿಪಾದಿಸಿದ್ದಾರೆ.
'ಆದರೆ ಸಮಸ್ಯೆ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಅವರೆಲ್ಲರೂ ಸಾಮಾನ್ಯ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅವರನ್ನು ದೊಡ್ಡ ಕನಸಿನ ಆಮಿಷ ಒಡ್ಡಿ ದಾರಿ ತಪ್ಪಿಸಿ ಅಮೆರಿಕಕ್ಕೆ ಕರೆದೊಯ್ಯಲಾಗಿದೆ. ಅದಕ್ಕಾಗಿಯೇ ನಾವು ಮಾನವ ಕಳ್ಳಸಾಗಣೆಯ ವ್ಯವಸ್ಥೆಯ ವಿರುದ್ಧ ಹೋರಾಡುವ ಅಗತ್ಯವಿದೆ. ನಾವೆಲ್ಲರೂ ಒಗ್ಗಟ್ಟಾಗಿ ಮಾನವ ಕಳ್ಳಸಾಗಣೆಯನ್ನು ಬೇರುಸಹಿತ ಕಿತ್ತು ನಾಶಪಡಿಸಬೇಕು' ಎಂದು ಹೇಳಿದ್ದಾರೆ.
'ನಮ್ಮ ಈ ಹೋರಾಟದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪೂರ್ಣ ಬೆಂಬಲ ಸಿಗುವ ಪೂರ್ಣ ನಂಬಿಕೆಯಿದೆ' ಎಂದು ಅವರು ಹೇಳಿದ್ದಾರೆ.
ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದ ಭಾರತೀಯರನ್ನು ವಾಪಸ್ ಕಳುಹಿಸುವ ಪ್ರಕ್ರಿಯೆಯ ಮೊದಲ ಹಂತವಾಗಿ 104 ಭಾರತೀಯರನ್ನು ಹೊತ್ತ ಅಮೆರಿಕ ಸೇನಾ ವಿಮಾನವು ಅಮೃತಸರಕ್ಕೆ ಬಂದಿಳಿದಿತ್ತು. ಆದರೆ ಪ್ರಯಾಣದ ಉದ್ದಕ್ಕೂ ಕೈ–ಕಾಲುಗಳಿಗೆ ಕೋಳ ತೊಡಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.