ADVERTISEMENT

ಮ್ಯಾನ್ಮಾರ್: ಸಗೇಂಗ್ ಪ್ರಾಂತ್ಯದ ವಿವಿಧೆಡೆ ಸಂಘರ್ಷ, ಇಂಟರ್‌ನೆಟ್‌ ಕಡಿತ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 6:43 IST
Last Updated 27 ಸೆಪ್ಟೆಂಬರ್ 2021, 6:43 IST
ಮ್ಯಾನ್ಮಾರ್‌ನಲ್ಲಿ  ಸೇನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಸಂಗ್ರಹ ಚಿತ್ರ
ಮ್ಯಾನ್ಮಾರ್‌ನಲ್ಲಿ  ಸೇನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಸಂಗ್ರಹ ಚಿತ್ರ   

ಮ್ಯಾನ್ಮಾರ್ (ರಾಯಿಟರ್ಸ್‌): ಮ್ಯಾನ್ಮಾರ್‌ನ ಸಗೇಂಗ್‌ ಪ್ರಾಂತ್ಯಕ್ಕೆ ಸೇನಾ ಅಧಿಕಾರಿಗಳ ಸಮಿತಿ ಪ್ರವೇಶಕ್ಕೆ ವಿರೋಧ, ಸಂಘರ್ಷಕ್ಕೆ ಮುಂದಾದ ಹಿಂದೆಯೇ ಮ್ಯಾನ್ಮಾರ್‌ನ ಸೇನೆ ಇಲ್ಲಿ ವಾಯುದಾಳಿ ನಡೆಸಿದೆ. ಸಂಘರ್ಷದ ಬಳಿಕ ಈ ಪ್ರಾಂತ್ಯದ ವಿವಿಧ ನಗರಗಳಲ್ಲಿ ಫೋನ್ ಹಾಗೂ ಇಂಟರ್‌ನೆಟ್‌ ಸಂಪರ್ಕ ಕಡಿತಗೊಳಿಸಲಾಗಿದೆ.

ಈ ವರ್ಷದ ಫೆಬ್ರುವರಿ 1ರ ಸೇನಾದಂಗೆಯ ಬಳಿಕ ದೇಶದಲ್ಲಿ ಬಿಕ್ಕಟ್ಟು, ಅನಿಶ್ಚಿತ ಸ್ಥಿತಿ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಗೆ ತೀವ್ರ ಒತ್ತಾಯವಿದ್ದು, ಸೇನೆಯನ್ನು ಎದುರಿಸಲು ನಾಗರಿಕರ ರಕ್ಷಣಾ ಪಡೆ ಅಸ್ತಿತ್ವಕ್ಕೆ ಬಂದಿದೆ.

ಮ್ಯಾನ್ಮಾರ್‌ ಸೇನೆಯು ವಾಯುದಾಳಿ ನಡೆಸಿರುವುದನ್ನು ಸ್ಥಳೀಯ ಡಿವಿಬಿ ಸುದ್ದಿಜಾಲ ಪ್ರಸಾರ ಮಾಡಿದೆ. ದೇಶದ ವಾಯವ್ಯ ಭಾಗದ ಪಿನ್ಲೆಬುವಿನಲ್ಲಿ ದಾಳಿ ನಡೆದಿದೆ. ಫೋನ್‌, ಇಂಟರ್‌ನೆಟ್‌ ಸಂಪರ್ಕ ಕಡಿತಕ್ಕೂ ಮೊದಲು ಸ್ಥಳೀಯರು ಯುದ್ಧ ವಿಮಾನಗಳ ಸಂಚಾರ, ಸ್ಫೋಟಕಗಳ ಸದ್ದು ಕೇಳಿಸಿಕೊಂಡಿದ್ದಾರೆ.

ADVERTISEMENT

ಪಿನ್ಲೆಬು ಪಿಡಿಎಫ್‌ನ ಸದಸ್ಯರೊಬ್ಬರು, ಇಂಟರ್‌ನೆಟ್‌ ಸಂಪರ್ಕ ಕಡಿತವಾಗಿದ್ದನ್ನು ದೃಢಪಡಿಸಿದ್ದಾರೆ. ಆದರೆ, ಯಾರಿಗೂ ಪೆಟ್ಟಾಗಿಲ್ಲ. ಸಂಪರ್ಕ ಕೊರತೆಯಿಂದ ಸ್ಥಳೀಯರ ಜೊತೆಗೆ ಸಂವಹನವಾಗಿಲ್ಲ ಎಂದು ಹೇಳಿದ್ದಾರೆ.

ಆದರೆ, ಈ ಹೇಳಿಕೆಯನ್ನು ದೃಢಪಡಿಸಿಕೊಳ್ಳಲು ಸುದ್ದಿಸಂಸ್ಥೆಗೆ ಸಾಧ್ಯವಾಗಿಲ್ಲ. ಸೇನೆಯ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಸೇನಾದಂಗೆ ಬಳಿಕ ಅಧಿಕಾರದಿಂದ ಪದಚ್ಯುತರಾದ ಜನಪ್ರತಿನಿಧಿಗಳು ರಚಿಸಿಕೊಂಡಿರುವ ರಾಷ್ಟ್ರೀಯ ಒಕ್ಕೂಟ ಸರ್ಕಾರವು, ಈ ಪ್ರಾಂತ್ಯಕ್ಕೆ ಸೇನಾಧಿಕಾರಿಗಳ ಸಮಿತಿ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಘರ್ಷಣೆಯ ವೇಳೆ ಸುಮಾರು 25 ಮಂದಿ ಸೈನಿಕರು ಮೃತಪಟ್ಟಿದ್ದಾರೆ. ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಮೊದಲು ಪ್ರತಿರೋಧ, ಪ್ರತಿಭಟನೆಯನ್ನು ಹತ್ತಿಕ್ಕುವ ಕ್ರಮವಾಗಿ ಸೇನೆಯು ಈ ಭಾಗದಲ್ಲಿ ಪ್ರಮುಖ ನಗರಗಳಲ್ಲಿ ಇಂಟರ್‌ನೆಟ್‌ ಸಂಪರ್ಕವನ್ನು ಕಡಿತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.